ಬೆಂಗಳೂರು, ಡಿ.3- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ತ್ವರಿತ ಗತಿಯಲ್ಲಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ವಾಟಾಳ್ ನಾಗಾರಾಜ್ ಇಂದು ವಿನೂತನವಾಗಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಇದೇ 5ರಂದು ಬೆಂಗಳೂರಿನಿಂದ ಮೇಕೆದಾಟಿಗೆ ಮೇಕೆಗಳ ರ್ಯಾಲಿ ನಡೆಸುವುದಾಗಿ ಹೇಳಿದರು.
ತಮಿಳುನಾಡು ವಿರೋzಕ್ಕೆ ತಲೆ ಕೆಡಿಸಿಕೊಳ್ಳದೇ, sÀಸುಪ್ರೀಂಕೋರ್ಟ್ ತೀರ್ಮಾನದ ಪ್ರಕಾರ ಎಷ್ಟು ಕಾವೇರಿ ನೀರನ್ನು ಕೊಡಬೇಕೋ ಅಷ್ಟನ್ನು ನಾವು ಕೊಡುತ್ತಿದ್ದೇವೆ. ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ತಡೆಗಟ್ಟಿ ಅಣೆಕಟ್ಟು ನಿರ್ಮಾಣ ಮಾಡಿ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ಮಾಡಲು ತಮಿಳುನಾಡಿನ ಅಪ್ಪಣೆ ಬೇಕಾಗಿಲ್ಲ. ರಾಜ್ಯ ಸರ್ಕಾರ ಕೂಡಲೇ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಮಾಡಬೇಕು ಎಂದು ಆಗ್ರಹಿಸಿದರು.
ಮೇಕೆದಾಟು ಯೋಜನೆ ಸಂಬಂಧ ಮಾಜಿ ಸಿಎಂಗಳ ಸಭೆ ಕರೆದಿರುವುದು ಅವೈಜ್ಞಾನಿಕವಾಗಿದೆ.ಅವರೇನು ತಾಂತ್ರಿಕ ತಜ್ಞರಲ್ಲ. ಅದರ ಬದಲು ನೀರಾವರಿ, ಪರಿಸರ ಹಾಗೂ ತಾಂತ್ರಿಕ ತಜ್ಞರನ್ನು ಕರೆಸಿ ಚರ್ಚಿಸಿ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ವಿಳಂಬವಾದಷ್ಟು ಅಪಾಯ ಕಟ್ಟಿಟ್ಟ ಬುತ್ತಿ.ಕಾನೂನು ತೊಡಕುಗಳು ಎದುರಾಗುತ್ತವೆ. ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.ಅದರ ವಿರುದ್ಧ ಸಮರ್ಥವಾಗಿ ವಾದ ಮಂಡಿಸಬೇಕು ಮತ್ತು ಇತ್ತ ಕಾಮಗಾರಿ ಪ್ರಾರಂಭಿಸಬೇಕೆಂದು ವಾಟಾಳ್ ಆಗ್ರಹಿಸಿದರು.
ಈ ಯೋಜನೆಯಿಂದ ನಮಗೆ ಕುಡಿಯುವ ನೀರು ಲಭ್ಯವಾಗುತ್ತದೆ ಹಾಗೂ ವಿದ್ಯುತ್ ಉತ್ಪಾದನೆಯಾಗುತ್ತದೆ.ಆದ್ದರಿಂದ ಇದನ್ನು ಶೀಘ್ರ ಪ್ರಾರಂಭಿಸಬೇಕೆಂದು ವಾಟಾಳ್ ಒತ್ತಾಯಿಸಿದರು.