ಜೆಡಿಎಸ್ ಸದಸ್ಯ ಭದ್ರೇಗೌಡ ಉಪಮೇಯರ್ ಆಯ್ಕೆ ಖಚಿತ

ಬೆಂಗಳೂರು,ಡಿ.3-ರಮೀಳಾ ಉಮಾಶಂಕರ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನ ನಾಗಪುರ ವಾರ್ಡ್‍ನ ಜೆಡಿಎಸ್ ಸದಸ್ಯ ಭದ್ರೇಗೌಡ ಅವರಿಗೆ ಒಲಿಯುವುದು ಬಹುತೇಕ ಖಚಿತಪಟ್ಟಿದೆ.

ಡಿ.5ರಂದು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಭದ್ರೇಗೌಡ ಅವರನ್ನು ಉಪಮೇಯರ್ ಅಭ್ಯರ್ಥಿಯನ್ನಾಗಿಸಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿದ್ದ ಉಪಮೇಯರ್ ಸ್ಥಾನದ ಮೇಲೆ ವಿಶ್ವನಾಥನಾಗೇನಹಳ್ಳಿ ವಾರ್ಡ್‍ನ ರಾಜಶೇಖರ್, ಕಾವಲ್‍ಭೆರಸಂದ್ರ ವಾರ್ಡ್‍ನ ನೇತ್ರಾ ನಾರಾಯಣ್ ಹಾಗೂ ನಾಗಪುರ ವಾರ್ಡ್‍ನ ಭದ್ರೇಗೌಡ ಅವರು ಕಣ್ಣಿಟ್ಟಿದ್ದರು.

ರಾಜಶೇಖರ್ ಅವರು ಉಪಮೇಯರ್ ಸ್ಥಾನ ನೀಡಿ ಇಲ್ಲದಿದ್ದರೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ಮೇಲೆ ಒತ್ತಡ ತಂದಿದ್ದರು.
ಪಾಲಿಕೆಯಲ್ಲಿ ಹಾಲಿ ಜೆಡಿಎಸ್ ಗುಂಪಿನ ನಾಯಕಿಯಾಗಿರುವ ನೇತ್ರಾ ನಾರಾಯಣ್ ಅವರು ಕೂಡ ಉಪಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟು ಲಾಬಿ ನಡೆಸಿದ್ದರು.
ಈ ಮೂವರ ಪ್ರಬಲ ಪೈಪೆÇೀಟಿ ನಡುವೆಯೇ ನಾಗಪುರ ವಾರ್ಡ್‍ನ ಭದ್ರೇಗೌಡ ಅವರನ್ನು ಉಪಮೇಯರ್‍ನ್ನಾಗಿಸಲು ವರಿಷ್ಠರು ತೀರ್ಮಾನಿಸಿದ್ದು, ನಾಳೆ ಅಧಿಕೃತವಾಗಿ ಅವರ ಹೆಸರನ್ನು ಘೋಷಿಸಲಾಗುವುದು ಎಂದು ತಿಳಿದುಬಂದಿದೆ.
ಉಪಮೇಯರ್ ಆಯ್ಕೆ ಸಂದರ್ಭದಲ್ಲೇ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೂ ಚುನಾವಣೆ ನಡೆಯಲಿದ್ದು, ಪ್ರಮುಖ ಸಮಿತಿ ಪಡೆಯಲು ಜೆಡಿಎಸ್, ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರ ನಡುವೆ ಕಸರತ್ತು ಆರಂಭಗೊಂಡಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಶಿಕ್ಷಣ, ತೋಟಗಾರಿಕೆ ಹಾಗೂ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಯನ್ನು ಪಡೆದುಕೊಂಡಿರುವ ಜೆಡಿಎಸ್ ಈ ಬಾರಿಯೂ ಈ ನಾಲ್ಕು ಸಮಿತಿಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಪ್ರಮುಖ ಸಮಿತಿಯಾದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಮೇಲೆ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಅವರು ಕಣ್ಣಿಟ್ಟಿದ್ದು, ಶಾಸಕ ಗೋಪಾಲಯ್ಯ ಅವರ ಮೂಲಕ ವರಿಷ್ಠರ ಮೇಲೆ ಒತ್ತಡ ತಂದು ತೆರಿಗೆ ಸಮಿತಿ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಕಸರತ್ತು ನಡೆಸಿದ್ದಾರೆ.
ಉಳಿದಂತೆ ವಿಶ್ವನಾಥ ನಾಗೇನಹಳ್ಳಿ ವಾರ್ಡ್‍ನ ಸದಸ್ಯ ರಾಜಶೇಖರ್ ಹಾಗೂ ಬಿನ್ನಿಪೇಟೆ ವಾರ್ಡ್‍ನ ಐಶ್ವರ್ಯಾ ನಾಗರಾಜ್ ಅವರಿಗೆ ಈ ಬಾರಿ ಎರಡು ಸ್ಥಾಯಿ ಸಮಿತಿ ಸಿಗುವುದು ನಿಶ್ಚಯ.

ಉಳಿದ ಮತ್ತೊಂದು ಸ್ಥಾನದ ಮೇಲೆ ಮಾಜಿ ಉಪಮೇಯರ್‍ಗಳಾದ ಪದ್ಮಾವತಿ ನರಸಿಂಹಮೂರ್ತಿ, ಆನಂದ್, ಜೆಡಿಎಸ್ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ, ದೇವದಾಸ್‍ರವರು ಕಣ್ಣಿಟ್ಟಿದ್ದಾರೆ.

ನಾಲ್ಕು ಸಮಿತಿಗಳು ಕಾಂಗ್ರೆಸ್‍ಗೆ:
ಈ ಬಾರಿ ಲೆಕ್ಕಪತ್ರ, ನಗರಯೋಜನೆ, ಬೃಹತ್ ಕಾಮಗಾರಿ, ಸಾಮಾಜಿಕ ನ್ಯಾಯ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗಳನ್ನು ಪಡೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಎರಡು ಬಾರಿ ಮೇಯರ್ ಸ್ಥಾನದಿಂದ ವಂಚಿತರಾಗಿರುವ ಸೌಮ್ಯ ಶಿವಕುಮಾರ್ ಹಾಗೂ ಲಾವಣ್ಯ ಗಣೇಶ್ ರೆಡ್ಡಿ ಅವರಿಗೆ ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಗಿರಿ ದೊರೆಯುವುದು ಬಹುತೇಕ ಖಚಿತಪಟ್ಟಿದೆ.

ಉಳಿದ ಎರಡು ಸ್ಥಾನ ಕೇಶವಮೂರ್ತಿ ಹಾಗೂ ಉದಯಕುಮಾರ್ ಅವರಿಗೆ ಒಲಿಯುವ ಸಾಧ್ಯತೆಗಳಿವೆ.
ನಗರಯೋಜನೆ ಸ್ಥಾಯಿ ಸಮಿತಿಗೆ ಜೆಡಿಎಸ್ ಪಟ್ಟು ಹಿಡಿದರೆ ಅದರ ಬದಲು ಬೃಹತ್ ಕಾಮಗಾರಿ ಸ್ಥಾಯಿಸಮಿತಿ ಬಿಟ್ಟುಕೊಡುವಂತೆ ಕಾಂಗ್ರೆಸ್ ಪಟ್ಟು ಹಿಡಿಯುವ ಸಾಧ್ಯತೆಗಳಿವೆ.

ಪಕ್ಷೇತರರ ಪಟ್ಟು:
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗಾಗಿ ಆಡಳಿತರೂಢ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿರುವ ಬೆನ್ನಲ್ಲೇ ಆ ಸಮಿತಿಯನ್ನು ನಮಗೆ ಬಿಟ್ಟುಕೊಡಬೇಕು ಎಂದು ಪಕ್ಷೇತರರು ಪಟ್ಟು ಹಿಡಿದಿದ್ದಾರೆ.

ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಸ್ತಿತ್ವಕ್ಕೆ ಬರಲು ನಾವೇ ಕಾರಣ. ನಮಗೆ ಇದುವರೆಗೂ ಸೂಕ್ತ ಸ್ಥಾನ ಲಭಿಸಿಲ್ಲ. ಈ ಬಾರಿ ಪಕ್ಷೇತರರಿಗೆ ಪ್ರಮುಖ ಖಾತೆ ಬಿಟ್ಟುಕೊಡಲು ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸಮ್ಮತಿಸಿದ್ದಾರೆ ಎಂದು ಪಕ್ಷೇತರ ಸದಸ್ಯ ಲಕ್ಷ್ಮಿನಾರಾಯಣ್ ತಿಳಿಸಿದ್ದಾರೆ.

ಒಂದು ಬಾರಿ ಮೇಯರ್, ಉಪಮೇಯರ್ ಸ್ಥಾನ ಅಲಂಕರಿಸಿದವರು ಮತ್ತೆ ಸಮಿತಿ ಅಧ್ಯಕ್ಷಗಿರಿ ಪಡೆದುಕೊಳ್ಳಲು ಮುಂದಾಗಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಬಾರಿ ನನಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಲಭಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಉಳಿದಂತೆ ಆರೋಗ್ಯ, ಮಾರುಕಟ್ಟೆ ಹಾಗೂ ಅಫೀಲು ಸ್ಥಾಯಿಸಮಿತಿಗಳು ಪಕ್ಷೇತರ ಸದಸ್ಯರಿಗೆ ಒಲಿಯುವ ಸಾಧ್ಯತೆಗಳಿವೆ. ಒಂದು ವೇಳೆ ಪಕ್ಷೇತರರಿಗೆ ಪ್ರಮುಖ ಸಮಿತಿ ಲಭಿಸಿದರೆ ಒಂದು ಸ್ಥಾನವನ್ನು ಕಾಂಗ್ರೆಸ್‍ಗೆ ತ್ಯಾಗ ಮಾಡಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ