ಸಣ್ಣ ಕೈಗಾರಿಕೆಗಳ ಸಮಸ್ಯೆ ಬಗ್ಗೆ ಡಿ.8ರಂದು ಸಂಸದರೊಂದಿಗೆ ಸಮಾಲೋಚನೆ, ಕಾಸಿಯಾ ಅಧ್ಯಕ್ಷರ ಹೇಳಿಕೆ

ಬೆಂಗಳೂರು,ಡಿ.3- ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಡಿ.8ರಂದು ರಾಜ್ಯದ ಸಂಸದರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಕಾಸಿಯಾ ಅಧ್ಯಕ್ಷ ಬಸವರಾಜು ಎಸ್. ಜವಳಿ ತಿಳಿಸಿದರು.

ದಕ್ಷಿಣ ರಾಜ್ಯಗಳ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಪ್ರತಿನಿಧಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ಮತ್ತು ಸೂಕ್ಷ್ಮ ಉದ್ಯಮ ಕೈಗಾರಿಕೆಗಳನ್ನು ವಾರ್ಷಿಕ ವಹಿವಾಟಿನ ಮೇಲೆ ವರ್ಗೀಕರಿಸುವ ಪ್ರಸ್ತಾವನೆ ಇದೆ. ಅದನ್ನು ಕೈಬಿಟ್ಟು ಚಾಲ್ತಿಯಲ್ಲಿರುವ ಪದ್ದತಿಯನ್ನು ಮುಂದುವರೆಸಬೆಕೆಂದು ಒತ್ತಾಯಿಸಿದರು.

ವಾರ್ಷಿಕ 2 ಕೋಟಿ ವಹಿವಾಟು ನಡೆಸುವ ಕೈಗಾರಿಕೆಗಳನ್ನು ಸೂಕ್ಷ್ಮ, 2 ಕೋಟಿಯಿಂದ 25 ಕೋಟಿ ವಹಿವಾಟು ನಡೆಸುವ ಸಣ್ಣ ಕೈಗಾರಿಕೆ ಹಾಗೂ 25ರಿಂದ 50 ಕೋಟಿ ವಹಿವಾಟ ನಡೆಸುವ ಕೈಗಾರಿಕೆಗಳನ್ನು ಮಧ್ಯಮ ಕೈಗಾರಿಕೆ ಎಂದು ವರ್ಗೀಕರಿಸಲು ಉದ್ದೇಶಿಸಲಾಗಿದೆ.ಇದನ್ನು ಕೈಬಿಡಬೇಕು.ಈ ವಿಚಾರದ ಬಗ್ಗೆ ಸಂಸದರೊಂದಿಗೆ ಸಮಾಲೋಚನೆ ನಡೆಸಿ ಹಳೆಯ ಪದ್ದತಿಯನ್ನು ಮುಂದುವರೆಸಲು ಚರ್ಚಿಸಲಾಗುವುದು ಎಂದರು.

ಇತರೆ ರಾಜ್ಯಗಳ ಸಣ್ಣ ಕೈಗಾರಿಕೆಗಳು ಸಮಸ್ಯೆಗಳ ಕುರಿತು ಆಯಾ ರಾಜ್ಯದ ಸಂಸದರೊಂದಿಗೆ ಚರ್ಚೆ ನಡೆಸುತ್ತೇವೆ. ಸಾರ್ವಜನಿಕ ವಲಯ ಉದ್ಯಮಿಗಳು ಸೂಕ್ಷ ಮತ್ತು ಸಣ್ಣ ಕೈಗಾರಿಕೆ ಶೇ.25ರಷ್ಟು ಕಚ್ಚಾ ಸಾಮಾಗ್ರಿ ಖರೀದಿಸಬೇಕು ಎಂದಿದೆ. ಆದರೆ 15ರ ಗಡಿ ಮೀರಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಲಾಗಿದೆ ಎಂದು ಜವಳಿ ತಿಳಿಸಿದರು.

ಈ ವೇಳೆ ಕಾಸಿಯಾ ಮಾಜಿ ಅಧ್ಯಕ್ಷ ಪದ್ಮನಾಭ್, ಸಣ್ಣ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಎಟಿಕೆ ರೆಡ್ಡಿ,ತಮಿಳುನಾಡು ಸಣ್ಣ ಕೈಗಾರಿಕೆಗಳ ಸಂಘದ ಜಂಟಿ ಕಾರ್ಯದರ್ಶಿ ವಿ.ಗುಣಶೇಖರನ್ ಆಂಧ್ರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸುಬ್ಬರಾವ್ ಸೇರಿದಂತೆ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ