ಬಿಜೆಪಿಯ ಗೇಮ್ ಪ್ಲ್ಯಾನ್ ಬಗ್ಗೆ ನಿಗಾ ವಹಿಸುವಂತೆ ಸಿ.ಎಂ ಸೂಚನೆ

ಬೆಂಗಳೂರು, ಡಿ.3-ಡಿಸೆಂಬರ್ 10 ರಂದು ನಡೆಯಲಿರುವ ಬೆಳಗಾವಿ ಅಧಿವೇಶನದ ವೇಳೆಗೆ ಸುಮಾರು 25 ಶಾಸಕರನ್ನು ತನ್ನತ್ತ ಸೆಳೆದು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸಿದ ಪ್ರಯತ್ನದ ಆಡಿಯೋವೊಂದು ಗುಪ್ತಚರ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಕೈ ಸೇರಿದೆ.

ಕಾಂಗ್ರೆಸ್ ಶಾಸಕರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನದ ಜೊತೆಗೆ 20 ರಿಂದ 25 ಕೋಟಿ ರೂ. ಹಣ ನೀಡುತ್ತೇವೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬನ್ನಿ. ಮತ್ತೆ ನಾವೇ ಚುನಾವಣಾ ವೆಚ್ಚ ಭರಿಸಿ ಶಾಸಕರನ್ನಾಗಿ ಮಾಡುತ್ತೇವೆ ಎಂಬ ಆಮಿಷವನ್ನು ಒಡ್ಡಿರುವ ಆಡಿಯೋ ದೊರೆತಿದೆ.

ಕಾಂಗ್ರೆಸ್‍ನ 25ಕ್ಕೂ ಹೆಚ್ಚು ಶಾಸಕರನ್ನು ಬಿಜೆಪಿ ಮುಖಂಡರಾದ ಆರ್.ಅಶೋಕ್, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಿ.ಪಿ.ಯೋಗೇಶ್ವರ್, ಜನಾರ್ಧನ್‍ರೆಡ್ಡಿ, ಶ್ರೀರಾಮುಲು ಹಾಗೂ ಇನ್ನಿತರ ಉದ್ಯಮಿಗಳು ಸೇರಿದಂತೆ ಹಲವರು ಸಂಪರ್ಕಿಸಿದ್ದಾರೆ. ಇದರ ಭಾಗವಾಗಿ ಶ್ರೀರಾಮುಲು ಅವರ ಆಪ್ತ ಸಹಾಯಕ ದುಬೈ ಮೂಲದ ಉದ್ಯಮಿಯೊಬ್ಬರಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿರುವ ಆಡಿಯೋವೊಂದು ಬಹಿರಂಗವಾಗಿದೆ.

ಇದರಲ್ಲಿ ಕಾಂಗ್ರೆಸ್ ಶಾಸಕರ ಹೆಸರುಗಳನ್ನು ಉಲ್ಲೇಖಿಸಿ ಮಾತನಾಡಿರುವುದು, ಅಧಿವೇಶನ ನಡೆಯುವುದರೊಳಗೆ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇವೆಂದು ರಾಜ್ಯ ಗುಪ್ತಚರ ಇಲಾಖೆಯು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳು ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವದ ಗಮನಕ್ಕೆ ತಂದು ಬಿಜೆಪಿಯ ಗೇಮ್ ಪ್ಲ್ಯಾನ್ ಬಗ್ಗೆ ನಿಗಾ ವಹಿಸಬೇಕೆಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಹೇಗಾದರೂ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಕಳೆದ ಆರು ತಿಂಗಳಿನಿಂದ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಆ ಪ್ರಯತ್ನಗಳೂ ಕೂಡ ವಿಫಲಗೊಳ್ಳುತ್ತಿವೆ. ಹಾಗಾಗಿ ಈ ಬಾರಿ ಹೇಗಾದರೂ ಮಾಡಿ ಸರ್ಕಾರವನ್ನು ಅಸ್ಥಿರಗೊಳಿಸಲೇಬೇಕೆಂದು ಬಿಜೆಪಿ ಪಣತೊಟ್ಟು ಮರಳಿ ಮರಳಿ ಪ್ರಯತ್ನಿಸುತ್ತಲೇ ಬಂದಿದೆ.

ಯಾವುದೇ ಕಾಂಗ್ರೆಸ್ ಶಾಸಕರು ಬಿಜೆಪಿ ಮುಖಂಡರೊಂದಿಗೆ ಸಂಪರ್ಕದಲ್ಲಿ ಇರದಂತೆ ನೋಡಿಕೊಳ್ಳಬೇಕೆಂದು ಹೈಕಮಾಂಡ್ ಸೂಚಿಸಿದೆ.
ಈ ನಡುವೆ ರಮೇಶ್ ಜಾರಕಿ ಹೊಳಿ, ಮುರಗೇಶ್ ನಿರಾಣಿ, ಶಾಸಕ ಯೋಗೀಶ್ ಮತ್ತಿತರರು ತಡರಾತ್ರಿ ಖಾಸಗಿ ಹೊಟೇಲ್‍ನಲ್ಲಿ ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ.ಅಲ್ಲದೆ, ಸತೀಶ್ ಜಾರಕಿ ಹೊಳಿ ಅವರು ರೆಸಾರ್ಟ್‍ವೊಂದರಲ್ಲಿ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಗಾಳ ಹಾಕಿದ್ದಾರೆ ಎನ್ನಲಾದ ಹಲವು ಕಾಂಗ್ರೆಸ್ ಶಾಸಕರು, ನಾವು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೊರ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಸಚಿವಾಕಾಂಕ್ಷಿ ಬಿ.ಸಿ.ಪಾಟೀಲ್ ಅವರು, ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ನಾನು ಸಚಿವಾಕಾಂಕ್ಷಿ ನಿಜ. ಅದನ್ನು ಇಲ್ಲಿಯೇ ಇದ್ದು ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಯಾರೂ, ಎಲ್ಲೂ ಹೋಗುವುದಿಲ್ಲ. ಎಲ್ಲಾ ಊಹಾಪೆÇೀಹ ಸರ್ಕಾರ ಸ್ಥಿರವಾಗಿರುತ್ತದೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿ ಹೊಳಿ ಅವರು ಖಾಸಗಿ ರೆಸಾರ್ಟ್‍ನಲ್ಲಿ ಶಾಸಕರೊಂದಿಗೆ ಸಭೆ ನಡೆಸಿರುವುದು ಮತ್ತು ಪ್ರವಾಸಕ್ಕೆ ಹೋಗುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ವಿಷಯ.ಸಣ್ಣಪುಟ್ಟ ವಿಚಾರಗಳಿದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತಾರೆ.ಯಾವುದೇ ಕಾರಣಕ್ಕೂ ಅವರು ಪಕ್ಷದ ವಿರುದ್ಧದ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ಭರವಸೆ ನನಗಿದೆ ಎಂದು ತಿಳಿಸಿದ್ದಾರೆ.
ಸಸ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ