ವಿಶ್ವ ಔಷಧ ದಿನಾಚರಣೆ: ಜಾಗೃತಿ ಮೆರವಣಿಗೆ

ಬೆಂಗಳೂರು, ಡಿ.2-ರೋಗಗಳನ್ನು ನಿವಾರಿಸಬಲ್ಲ ಔಷಧಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತಿಮುಖ್ಯ ಎಂದು ಸರ್ಕಾರಿ ಕಾಲೇಜು ಆಫ್ ಫಾರ್ಮಸಿಯ ಪ್ರಾಚಾರ್ಯ ಡಾ.ಕೆ.ಪಿ.ಚನ್ನಬಸವರಾಜ್ ತಿಳಿಸಿದರು.

ಯಲಹಂಕದ ಆದಿತ್ಯ ಕಾಲೇಜಿನ ಔಷಧಾಲಯ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಔಷಧ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಔಷಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರೆ ಹಲವು ರೋಗಗಳನ್ನು ಆರಂಭಿಕ ಹಂತದಲ್ಲಿಯೇ ನಿವಾರಿಸಬಹುದು ಎಂದರು.

ಆಸ್ಪತ್ರೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಚಿಕಿತ್ಸಾಲಯಗಳಲ್ಲಿ ಫಾರ್ಮಸಿಸ್ಟ್ ಪಾತ್ರ ಅತಿಮುಖ್ಯ.ಔಷಧಾಲಯ ಶಿಕ್ಷಣ ಪಡೆಯುವ ಮೂಲಕ ಹೆಚ್ಚು ಉದ್ಯೋಗಾವಕಾಶಗಳನ್ನು ಪಡೆಯಬಹುದು ಎಂದು ತಿಳಿಸಿದರು.

ಫಾರ್ಮಸಿಸ್ಟ್‍ಗಳು ಆಸ್ಪತ್ರೆಗಳಿಗೆ ಚಿಕಿತ್ಸಾಲಯಗಳಿಗೆ ತುರ್ತು ಸಮಯಗಳಲ್ಲಿ ಔಷಧಗಳನ್ನು ಪೂರೈಸಲು ಹಗಲಿರುಳೆನ್ನದೆ ಶ್ರಮಿಸುತ್ತಾರೆ.ಅವರ ತಲುಪಿಸುವ ಔಷಧಿಗಳಿಂದ ರೋಗಿಗಳು ಗುಣಮುಖರಾದಾಗ ಅವರ ಮನಸ್ಸಿನಲ್ಲಿ ನೆಮ್ಮದಿ ಮೂಡಲಿದೆ ಎಂದು ಹೇಳಿದರು.
ಆದಿತ್ಯ ಕಾಲೇಜಿನ ಅಧ್ಯಕ್ಷ ಡಾ.ಬಿ.ಎ.ವಿಶ್ವನಾಥ್ ಮಾತನಾಡಿ, ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರ ಪಾತ್ರ ಎಷ್ಟು ಮುಖ್ಯವೋ ಅಷ್ಟು ಮುಖ್ಯ ಅವುಗಳನ್ನು ಪೂರೈಸುವ ಫಾರ್ಮಸಿಸ್ಟ್‍ಗಳ ಸೇವೆ ಅನನ್ಯ ಎಂದು ಹೇಳಿದರು.

ಆದಿತ್ಯ ಕಾಲೇಜಿನ ಔಷಧಾಲಯ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಮುಖ ಔಷಧ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದರು.
ಬೈಕುಂಜೆ ಸಲಹಾ ಕಂಪನಿಯ ಸಂಸ್ಥಾಪಕ ಉಮೇಶ್ ಬೈಕುಂಜೆ ಔಷಧಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ