ಸಿದ್ದಗಂಗಾಶ್ರೀಗಳಿಗೆ 2 ಸ್ಟಂಟ್‍ಗಳ ಬದಲಾವಣೆ; ಸ್ವಾಮೀಜಿ ಆರೋಗ್ಯ ಉತ್ತಮವಾಗಿದೆ: ಬಿಜಿಎಸ್ ಆಸ್ಪತ್ರೆ

ಬೆಂಗಳೂರು, ಡಿ.2- ಶ್ರೀ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರಿಗೆ ಆಪರೇಷನ್ ಇಲ್ಲದೆ 2 ಸ್ಟಂಟ್‍ಗಳನ್ನು ಬದಲಾಯಿಸಲಾಗಿದ್ದು, ಅವರ ಆರೋಗ್ಯ ಉತ್ತಮವಾಗಿದೆ ಎಂದು ಬಿಜಿಎಸ್ ಆಸ್ಪತ್ರೆ ಮೂಲಗಳು ತಿಳಿಸಿವೆ.

ಶ್ರೀಗಳಿಗೆ ಈವರೆಗೂ ಸುಮಾರು 9 ಸ್ಟಂಟ್‍ಗಳನ್ನು ಅಳವಡಿಸಲಾಗಿತ್ತು.2 ಸ್ಟಂಟ್‍ಗಳು ಜಾರಿರುವುದರಿಂದ ಉಸಿರಾಡಲು ಸಮಸ್ಯೆಯಾಗಿತ್ತು.ಪಿತ್ತಕೋಶ, ಮೂತ್ರನಾಳದಲ್ಲಿ ಸೋಂಕು ಉಂಟಾಗಿತ್ತು. ಕಳೆದ ಮೂರು ದಿನಗಳ ಹಿಂದೆ ಅವರನ್ನು ತಪಾಸಣೆಗೊಳಪಡಿಸಲಾಗಿದ್ದು,ಜಾರಿರುವ ಸ್ಟಂಟ್‍ಗಳನ್ನು ಬದಲಿಸುವ ಅಗತ್ಯವಿದ್ದುದರಿಂದ ಬೆಂಗಳೂರಿನ ಆಸ್ಪತ್ರೆಗೆ ಕರೆತರಲಾಯಿತು. ಈಗ ಸ್ಟಂಟ್‍ಗಳನ್ನು ಜೋಡಿಸಲಾಗಿದ್ದು, ಅವರ ಆರೋಗ್ಯ ಉತ್ತಮವಾಗಿದೆ.

ಎಂಡೋಸ್ಕೋಪಿಯ ಮೂಲಕ ಬಿದ್ದು ಹೋಗಿರುವ ಸ್ಟಂಟ್‍ಗಳನ್ನು ಅಳವಡಿಸಲಾಗಿದ್ದು, ಮತ್ತೆ ಒಂದು ಸ್ಟಂಟ್ ಹೊಸದಾಗಿ ಜೋಡಿಸಲಾಗಿದೆ.
ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ರವೀಂದ್ರ ಮಾತನಾಡಿ, ಪಿತ್ತಕೋಶ, ಮೂತ್ರನಾಳದಲ್ಲಿ ಸೋಂಕು ಉಂಟಾಗಿತ್ತು.ಎಂಡೋಸ್ಕೋಪಿ ಮೂಲಕ ಎರಡು ಸ್ಟಂಟ್‍ಗಳನ್ನು ಅಳವಡಿಸಿದ್ದೇವೆ. ಈಗ ಸೋಂಕು ಕಡಿಮೆಯಾಗಿದೆ.ಚಿಕಿತ್ಸೆ ವೇಳೆ ಅರವಳಿಕೆ ನೀಡಲಾಗಿತ್ತು. ಶ್ರೀಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಗಂಭೀರ ಪರಿಸ್ಥಿತಿ ಇದ್ದರೆ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಬೇಕಿತ್ತು.ಆದರೆ ಶ್ರೀಗಳು ಆರಾಮಾಗಿರುವುದರಿಂದ ಸದ್ಯಕ್ಕೆ ವಾರ್ಡ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.ಗಾಲ್ ಬ್ಲಾಡರ್‍ನ ಇನ್‍ಫೆಕ್ಷನ್ ಇದ್ದಾಗ ಕೆಲವೊಮ್ಮೆ ಪದೇ ಪದೇ ಜ್ವರ ಬರುವ ಸಾಧ್ಯತೆ ಇದೆ.ಹಾಗಾಗಿ ಶ್ರೀಗಳನ್ನು ಇಂದು ಡಿಸ್ಚಾರ್ಜ್ ಮಾಡದೆ ಆಸ್ಪತ್ರೆಯಲ್ಲಿಯೇ ಇರಿಸಿಕೊಂಡು ನಿಗಾ ವಹಿಸಲಾಗುವುದು ಎಂದು ಹೇಳಿದರು.

ಆಸ್ಪತ್ರೆಗೆ ದಾಖಲಾದ ಶ್ರೀಗಳ ಆರೋಗ್ಯ ವಿಚಾರಿಸಲು ಆದಿಚುಂಚನಗಿರಿ ಮಠದ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಶ್ರೀಗಳಿಗೆ 10 ಬಾರಿ ಸ್ಟಂಟ್ ಹಾಕಿದ್ದರೂ ಅವರ ಆರೋಗ್ಯ ಸುಸ್ಥಿರವಾಗಿರಲು ಆಸ್ಪತ್ರೆ ವೈದ್ಯರ ಶ್ರಮವೇ ಕಾರಣ.ಆಸ್ಪತ್ರೆಯಲ್ಲಿ ಶ್ರೀಗಳು ಭಕ್ತರನ್ನು ನಗುಮೊಗದಿಂದಲೇ ಭೇಟಿಯಾಗುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ವಿ.ಸೋಮಣ್ಣ ಶ್ರೀಗಳನ್ನು ಭೇಟಿ ಮಾಡಿದ್ದು, ನಂತರ ಮಾತನಾಡಿ, ದೇವರ ಆಶೀರ್ವಾದದಿಂದ ಶ್ರೀಗಳು ಆರೋಗ್ಯವಾಗಿದ್ದಾರೆ.ಡಾ.ರವೀಂದ್ರ ಅವರ ತಂಡ ಯಶಸ್ವಿಯಾಗಿ 2 ಸ್ಟಂಟ್‍ಗಳನ್ನು ಅಳವಡಿಸಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ