ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು: ಜಲಮಂಡಳಿ ಪ್ರಧಾನ ಮುಖ್ಯ ಅಭಿಯಂತರ ಕೆಂಪರಾಮಯ್ಯ ಕರೆ

Varta Mitra News

ಬೆಂಗಳೂರು,ಡಿ.2- ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆಯನ್ನು ನೀಗಿಸಿಕೊಳ್ಳುವುದರೊಂದಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಮಾಜದವರಿಗೆ ಅರಿವು ಮೂಡಿಸಬೇಕೆಂದು ಜಲಮಂಡಳಿ ಪ್ರಧಾನ ಮುಖ್ಯ ಅಭಿಯಂತರ ಕೆಂಪರಾಮಯ್ಯ ಕರೆ ನೀಡಿದ್ದಾರೆ.

ಗಾಂಧಿಭವನದಲ್ಲಿ ಕರ್ನಾಟಕ ರಾಜ್ಯಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ, ಮೈಸೂರು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟ ಪಂಗಡದ ಜನಾಂಗದವರಲ್ಲಿ ಶಿಕ್ಷಣದ ಕೊರತೆ ಇದೆ. ಆದ್ದರಿಂದ ನಾವು ಸರ್ಕಾರದ ಸೌಲಭ್ಯದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.

ನಮ್ಮಲ್ಲಿ ಸಂಘಟನೆಯ ಕೊರತೆಯಿದೆ.ವಿಚಾರ ವಿನಿಮಯವಾಗದೆ ಅಭಿವೃದ್ಧಿ ಹೊಂದಲು ಆಗುತ್ತಿಲ್ಲ. ಆದುದ್ದರಿಂದ ನಾವು ಸಂಘಟಿತರಾಗಬೇಕು.ಆರ್ಥಿಕವಾಗಿ ಸದೃಢವಾಗಿರುವಂಥವರು ಹಳ್ಳಿಹಳ್ಳಿಗೆ ತೆರಳಿ ಅಲ್ಲಿನ ಜನರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿ ಅವರಿಗೆ ಅರಿವು ಮೂಡಿಸಬೇಕು. ಇದರಿಂದ ನಮ್ಮ ಜನಾಂಗವು ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತದೆ ಎಂದರು.

ಬಸವೇಶ್ವರನಗರದಲ್ಲಿ ಶಾಖಾಮಠವೊಂದನ್ನು ನಿರ್ಮಿಸಿ ಅಲ್ಲಿ ನಮ್ಮ ಅಭಿವೃದ್ಧಿಯ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಆರ್.ಜಿ. ಸನ್ನಿ ಮಾತನಾಡಿ, ನಮ್ಮ ಜನಾಂಗದವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದರು.

ಈಗಾಗಲೇ ಬೇರೆ ಬೇರೆ ಜನಾಂಗದವರು ನಮಗೂ ಮೀಸಲಾತಿ ನೀಡಬೇಕು ಇಲ್ಲದಿದ್ದರೆ ಮೀಸಲಾತಿಯನ್ನೇ ತೆಗೆದು ಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಮೀಸಲಾತಿ ತೆಗೆದು ಹಾಕಿದ್ದೇ ಆದರೆ ನಾವು ಮತ್ತಷ್ಟೂ ಶೋಷಣೆಗೆ ಒಳಗಾಗುತ್ತೇವೆ ಎಂದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಏರಿಕೆ, ಮುಂಬಡ್ತಿ ವಿಳಂಬದ ಬಗ್ಗೆ ಚರ್ಚೆ ನಡೆಸಲಾಯಿತು. ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಮೈಸೂರು ಕರ್ನಾಟಕ ಬುಡಕಟ್ಟು ಸಂಶೋಧನಾ ಕೇಂದ್ರದ ನಿರ್ದೇಶಕ ಟಿ.ಟಿ.ಬಸವನಗೌಡ, ಟಿ.ರಾಘವೇಂದ್ರ ಕ.ಆ.ಸೆ, ಅಸಿಸ್ಟೆಂಟ್ ಕಮೀಷನರ್ ಆಫ್ ಪೆÇಲೀಸ್ ಪಂಪಾಪತಿ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ