ಡಿಸೆಂಬರ್ 5ರಂದು ಸಮನ್ವಯ ಸಮಿತಿ ಸಭೆ; ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಡಿ.2- ಇದೇ ಡಿಸೆಂಬರ್ 5ರಂದು ಸಮನ್ವಯ ಸಮಿತಿ ಸಭೆ ನಡೆಯಲಿದ್ದು ಅಂದೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ಈ ಕುರಿತು ಒಂದು ಹಂತದ ಚರ್ಚೆ ಮುಗಿದಿದ್ದು, ಅಂದಿನ ಸಭೆಯಲ್ಲಿ ತಾರ್ಕಿಕ ಹಂತದ ನಿರ್ಣಯ ಹೊರಬೀಳಲಿದೆ ಎಂದರು.

ಸಂಪುಟ ವಿಸ್ತರಣೆ ಬಳಿಕ ಸರ್ಕಾರ ಪತನವಾಗುತ್ತದೆ ಎಂಬ ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು , ಬಿಜೆಪಿಯವರಿಗೆ ಬಹುಮತ ಬಂದಿಲ್ಲ. ಆದರೂ ಅವರು ಏಕೆ ಕನಸು ಕಾಣುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಹೇಗಾದರೂ ಮಾಡಿ ಸಿಎಂ ಆಗಬೇಕೆಂಬ ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ಕನಸು ನನಸಾಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿದೆ.ನಮ್ಮ ಸರ್ಕಾರ ಬೀಳುವುದಿಲ್ಲ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ನನ್ನ ವಿರುದ್ಧ ಹೈಕಮಾಂಡ್‍ಗೆ ಯಾರೂ ದೂರು ನೀಡಿಲ್ಲ. ಇದು ಕೇವಲ ಊಹಾಪೆÇೀಹ.ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಿಲ್ಲ. ನಮ್ಮ ಪಕ್ಷದ ಶಾಸಕರು ಮಂತ್ರಿ ಮಂಡಲ ವಿಸ್ತರಣೆಗೆ ಅವಸರ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇಂದಿರಾ ಕ್ಯಾಂಟೀನ್‍ಗೆ ಅನುದಾನದ ಕೊರತೆ ಇಲ್ಲ.ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲೋಕಪಾಲ್ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಹೊರಗಡೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಲೋಕಪಾಲ್ ಜಾರಿ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ರೈತರ ಕಬ್ಬಿನ ಬಾಕಿ ಹಣ ಕೊಡಿಸಲಾಗುವುದು. ಕೇಂದ್ರ ಸರ್ಕಾರದ ಎಫ್‍ಆರ್‍ಪಿ ದರದಂತೆ ಕಬ್ಬು ಅರೆಯಲಾಗುವುದು ಎಂದರು.
ಶಾಸಕರಾದ ಸಿ.ಎಸ್.ಶಿವಳ್ಳಿ, ಪ್ರಸಾದ್ ಅಬ್ಬಯ್ಯ , ಸ್ಥಳೀಯ ಮುಖಂಡರಾದ ಸದಾನಂದ ಡಂಗನವರ್, ಶರಣಪ್ಪ ಕೊಟಗಿ ಮುಂತಾದವರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ