ಬೆಂಗಳೂರು, ಡಿ.1- ಕನ್ನಡ ಚಲನಚಿತ್ರಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪರಭಾಷಾ ಚಿತ್ರಗಳ ವೈಭವೀಕರಣ ಮಾಡುವುದನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಇಂದು ತಮಟೆ ಚಳವಳಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಭಾಷೆ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರೋದ್ಯಮ ಕುಸಿಯುತ್ತಿದೆ. ಕನ್ನಡ ಚಿತ್ರೋದ್ಯಮವನ್ನು ಬೆಳೆಸಬೇಕಾದ ಚಲನಚಿತ್ರ ವಾಣಿಜ್ಯ ಮಂಡಳಿ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದ ಅವರು, ಇದೇ ಪರಿಸ್ಥಿತಿ ಮುಂದುವರಿದರೆ ಕನ್ನಡ ಚಲನಚಿತ್ರದ ಪರಿಸ್ಥಿತಿ ಇತಿಹಾಸ ಸೇರುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.
ತಮಿಳು, ತೆಲುಗು, ಮಲೆಯಾಳಿ ಚಿತ್ರಗಳಿಗೆ ಚಿತ್ರಮಂದಿರಗಳು ಧಾರಾಳವಾಗಿ ಲಭಿಸುತ್ತವೆ. ಆದರೆ, ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ದೊರೆಯುವುದಿಲ್ಲ. ದೊರೆತರೂ ಒಂದು ವಾರವೂ ಪ್ರದರ್ಶನವಾಗುವುದಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬೇರೆ ಭಾಷೆಯವರೇ ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರು ಎಲ್ಲರೂ ಇದ್ದಾರೆ. ಹೀಗಾಗಿ ಕನ್ನಡ ಭಾಷೆಗೆ ಒತ್ತು ಕೊಡುವವರು ಕಡಿಮೆಯಾಗಿದ್ದಾರೆ.ಇದನ್ನು ವಿರೋಧಿಸಿ ಕನ್ನಡದ ಉಳಿವಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ರಜನಿಕಾಂತ್ ಅಭಿನಯದ 2.0 ಚಿತ್ರ ತಮಿಳುನಾಡಿನ ಚೆನ್ನೈನಲ್ಲಿ 500 ಪ್ರದರ್ಶನ ಕಂಡರೆ ಬೆಂಗಳೂರಿನಲ್ಲಿ 950 ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಪ್ರದರ್ಶನ ಕಾಣುತ್ತಿದೆ.ನಮ್ಮ ಕನ್ನಡದ ಚಿತ್ರಗಳಿಗೆ ಪ್ರದರ್ಶನಕ್ಕೆ ಚಿತ್ರಮಂದಿರಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.