ರಾಜ್ಯದ ಅಭಿವೃದ್ಧಿಗೆ ಮಾಧ್ಯಮಗಳ ಕೊಡುಗೆ ಮಹತ್ವವಾದದ್ದು ಸಿ.ಎಂ

ಬೆಂಗಳೂರು, ಡಿ.1-ರಾಜ್ಯದ ಅಭಿವೃದ್ಧಿ ದೃಷ್ಟಿಯಲ್ಲಿ ಮಾಧ್ಯಮಗಳ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ಮಹದೇವ ಪ್ರಕಾಶ್ ಅವರ ಅಂಕಣ ಬರಹಗಳ ಸಂಗ್ರಹ ಕೃತಿ ಹೊರಳು ನೋಟ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪ್ರತಿದಿನ ತಾವು 14 ಪತ್ರಿಕೆಗಳನ್ನು ಓದಿ, ನಂತರ ದಿನನಿತ್ಯದ ಕಾರ್ಯದಲ್ಲಿ ತೊಡಗುತ್ತೇವೆ. ಅಂಕಣ, ವಾಚಕರ ವಾಣಿ, ಸಂಪಾದಕೀಯ ಸೇರಿದಂತೆ ಹಲವಾರು ವಿಷಯಗಳನ್ನು ಓದುತ್ತೇನೆ. ಮುದ್ರಣ ಮಾಧ್ಯಮದವರು ಹಲವಾರು ಸಮಸ್ಯೆಗಳ ಬಗ್ಗೆ ಗಮನಹರಿಸಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳ ಅವ್ಯವಸ್ಥೆ ಕುರಿತಂತೆ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ವರದಿ ನೀಡಿ ಸರ್ಕಾರದ ಗಮನ ಹರಿಯುವಂತೆ ಮಾಡಿದೆ ಎಂದರು.

ದೃಶ್ಯ ಮಾಧ್ಯಮದಲ್ಲಿ ತಾಜಾ ಸುದ್ದಿಗೆ ಹೆಚ್ಚು ಆದ್ಯತೆ ನೀಡುತ್ತಾರೆ.ಜನರಿಗೆ ಬೇಗ ಅದನ್ನು ತಲುಪಿಸುವ ಧಾವಂತದಲ್ಲಿ ಅವಾಸ್ತವಿಕ ಸುದ್ದಿಗಳು ಹೆಚ್ಚು ಬಿತ್ತರವಾಗುತ್ತಿದೆ. ನಮ್ಮಲ್ಲಿ ಮಾತ್ರ ಎಂಬ ವ್ಯಾಖ್ಯಾನದಡಿ ಪ್ರಕಟವಾಗುವ ಸುದ್ದಿಗಳ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲೂ ಪತ್ರಕರ್ತರ ಕೊಡುಗೆ ಅಪಾರವಾಗಿತ್ತು.ಕೆಲಸದೊಂದಿಗಿನ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ಅನೇಕರು ಸಮಾಜಕ್ಕೆ ಕೊಡುಗೆಯನ್ನೇ ನೀಡುತ್ತಿದ್ದಾರೆ.ದೃಶ್ಯ ಮಾಧ್ಯಮಗಳಲ್ಲಿ ಚಿತ್ರನಟರ ಒಂದು ಸುದ್ದಿಯನ್ನೇ ಮೂರು ದಿನಗಳ ಕಾಲ ನಿರಂತರವಾಗಿ ಪ್ರಸಾರ ಮಾಡುತ್ತವೆ. ಅಪಘಾತ ಮತ್ತಿತರ ಸುದ್ದಿಗಳ ಪ್ರಸಾರದ ವೇಳೆ ದೃಶ್ಯ ಮಾಧ್ಯಮಗಳು ಪ್ರಕಟಿಸುವ ಚಿತ್ರಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಮಹದೇವ ಪ್ರಕಾಶ್ ಅವರ ವಿಶ್ಲೇಷಣೆ ಸತ್ಯಕ್ಕೆ ಹತ್ತಿರವಾಗಿರುತ್ತದೆ.ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಜನರಿಗೆ ತಿಳುವಳಿಕೆ ನೀಡುವಂತಿರಬೇಕು.ಪತ್ರಿಕೆಗಳ ಸಾಪ್ತಾಹಿಕ ಮತ್ತು ಪುರವಣಿಗಳು ದೇಶ, ವಿದೇಶಗಳ ಸಂಸ್ಕøತಿಗಳ ಬಗ್ಗೆ ಸಾಕಷ್ಟು ಬಗ್ಗೆ ಮಾಹಿತಿ ಒದಗಿಸುತ್ತವೆ. ದೃಶ್ಯ ಮಾಧ್ಯಮಗಳು ಕೀಳು ಅಭಿರುಚಿಯ ಕಾರ್ಯಕ್ರಮ ಪ್ರಸಾರ ಮಾಡಿ ಯುವಕರನ್ನು ಕೆಡಿಸುವ ಕೆಲಸ ಮಾಡಬಾರದು. ಹಣ ಮಾಡುವುದೇ ಮುಖ್ಯ ಉದ್ದೇಶವಾಗಬಾರದು ಎಂದು ಸಲಹೆ ಮಾಡಿದರು.
ಪತ್ರಿಕೆಗಳ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ.ಯುವಜನಾಂಗ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಹೆಚ್ಚಿನ ಸಮಯವನ್ನೂ ಮೀಸಲಿಡಬೇಕು ಎಂದು ಹೇಳಿದರು.
ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್, ಮಾಜಿ ಶಾಸಕ ನಂಜಯ್ಯ ಮಠ, ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್, ಸಿ.ಎನ್.ರಾಮಚಂದ್ರ, ದೀಪಕ್ ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ