ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ನಗರೀಕರಣದಿಂದ ಉತ್ಪತ್ತಿಯಾಗುತ್ತಿರುವ ಕಸದ ವಿಲೆವಾರಿ ದೊಡ್ಡ ಸಮಸ್ಯೆಯಾಗಿದೆ

ಬೆಂಗಳೂರು, ಡಿ.1-ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ನಗರೀಕರಣದಿಂದ ಉತ್ಪತ್ತಿಯಾಗುತ್ತಿರುವ ಕಸದ ವಿಲೇವಾರಿ ಒಂದು ದೊಡ್ಡ ಸವಲಾಗಿ ಪರಿಣಮಿಸಿದ್ದು, ಉತ್ಪತ್ತಿಯಾಗುತ್ತಿರುವ ಕಸದ ವೈಜ್ಞಾನಿಕ ವಿಲೇವಾರಿಗೆ ಗ್ರಾಮಾಂತರ ಜಿಲ್ಲಾ ಪಂಚಾಯತ್‍ನ ವ್ಯಾಪ್ತಿಯ ಎಲ್ಲಾ ಗ್ರಾ. ಪಂ.ಗಳಲ್ಲಿ ಮಾದರಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮಾಂತರ ಜಿ.ಪಂ. ಸಿಇಒ ಆರ್.ಲತಾ ಅಧಿಕಾರಿಗಳಿಗೆ ಸೂಚಿಸಿದರು.

ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯತ್‍ನ ಕೋಳಿಪುರ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕವನ್ನು ಪರಿಶೀಲಿಸಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಹಸಿ ಮತ್ತು ಒಣ ಕಸವನ್ನು ಮೂಲದಲ್ಲಿಯೇ ವಿಂಗಡಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸಬೇಕೆಂದು ಹೇಳಿದರು.

ನಂತರ ರಘುನಾಥಪುರ ಗ್ರಾಮಕ್ಕೆ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ದನದ ಕೊಟ್ಟಿಗೆ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು.

ಈ ವೇಳೆ ಮಾತನಾಡಿ, ದನದ ಕೊಟ್ಟಿಗೆ ನಿರ್ಮಾಣದಿಂದ ರಾಸುಗಳ ಆರೋಗ್ಯ ವೃದ್ಧಿಯಾಗಿ, ಗುಣಮಟ್ಟದ ಹಾಲು ಉತ್ಪಾದನೆಯಾಗಲು ಸಹಕಾರಿಯಾಗುತ್ತದೆ ಅಲ್ಲದೇ ಗ್ರಾಮದ ಪರಿಸರ ಸ್ವಚ್ಚವಾಗುವುದರಿಂದ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗುತ್ತದೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಟಿ.ಆರ್.ಶೋಭ, ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಯೋಜನಾ ನಿರ್ದೇಶಕ ಡಾ.ಶಿವರುದ್ರಪ್ಪ, ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ, ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ