ಮೇಕೆದಾಟು ಯೋಜನೆ ಕುರಿತು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಸಿ.ಎಂ. ಸಭೆ

ಬೆಂಗಳೂರು, ಡಿ.1- ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ತಗಾದೆ ತೆಗೆದಿರುವ ತಮಿಳುನಾಡಿಗೆ ತಿರುಗೇಟು ನೀಡಲು ರಾಜ್ಯ ಸರ್ಕಾರ ಇಂದು ನೀರಾವರಿ ತಜ್ಞರು ಹಾಗೂ ಕಾನೂನು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದೆ.

ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿ ಯೋಜನೆಯ ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಕಾನೂನಾತ್ಮಕ ತೊಡಕುಗಳ ನಿವಾರಣೆ ಸಂಬಂಧ ಇಂದು ಮುಖ್ಯಮಂತ್ರಿಗಳು ತಮ್ಮ ನೀರಾವರಿ ಸಲಹೆಗಾರರೊಂದಿಗೆ ಮಹತ್ವದ ಚರ್ಚೆ ನಡೆಸಿದರು.

ತಮ್ಮ ನಿವಾಸದಲ್ಲಿ ನೀರಾವರಿ ಆಧಿಕಾರಿಗಳು, ಕಾನೂನು ಅಧಿಕಾರಿಗಳೊಂದಿಗೆ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಯೋಜನೆ ಸಂಬಂಧ ಡಿಪಿಆರ್ ಸಲ್ಲಿಸಲು ಅನುಮತಿ ನೀಡಿದೆ.ಇದನ್ನು ವಿರೋಧಿಸಿ ತಮಿಳುನಾಡಿನವರು ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ.ಯಾವ ಅಂಶಗಳ ಮೇಲೆ ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ ಎಂಬ ಮಾಹಿತಿ ಪಡೆದು ರಾಜ್ಯಸರ್ಕಾರ ತನ್ನದೇ ಆದ ನಿರ್ಧಾರ ಕೈಗೊಳ್ಳಲಿದೆ.ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.

ಒಟ್ಟಾರೆ ಯೋಜನೆಯನ್ನು ಜಾರಿ ಮಾಡಬೇಕೆಂಬುದು ನಮ್ಮ ಮಹದಾಸೆಯಾಗಿದೆ.ಅಭಿವೃದ್ಧಿ ವಿಷಯದಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ವಿದ್ಯುತ್ ಉತ್ಪಾದನೆ, ನೀರಾವರಿಗೆ ಸಂಬಂಧಿಸಿದಂತೆ ಮೇಕೆದಾಟು ಸಮೀಪ ಕಾವೇರಿಗೆ ಅಣೆಕಟ್ಟು ನಿರ್ಮಿಸಲು ಮೇಕೆದಾಟು ಯೋಜನೆಯನ್ನು ರೂಪಿಸಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು. ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿ ವಿಸ್ತೃತ ಯೋಜನೆಯ ವರದಿ ಸಲ್ಲಿಸುವಂತೆ ಸೂಚಿಸಿದೆ.
ಈ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನಡೆಸಿರುವ ಸಭೆ ಮಹತ್ವ ಪಡೆದುಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ