ಬೆಂಗಳೂರು, ಡಿ.1- ನಗರದಲ್ಲಿ ರಕ್ಕಸ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಕ್ಕಳು, ವೃದ್ಧರು ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ಅಂದಾಜಿನ ಪ್ರಕಾರ ಪ್ರತಿ 500 ಮೀಟರ್ ಕೂಗಳತೆ ದೂರದಲ್ಲಿ ಸುಮಾರು ಏಳೆಂಟು ನಾಯಿಗಳು ಗುಂಪು ಗುಂಪಾಗಿ ವಾಸಿಸುತ್ತಿದ್ದು, ನಗರದಲ್ಲಿ ಸುಮಾರು ಮೂರೂವರೆ ಲಕ್ಷ ನಾಯಿಗಳಿವೆ ಎಂಬ ಮಾಹಿತಿ ಇದೆ.
ಬೀದಿನಾಯಿಗಳ ಹಾವಳಿಗೆ ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿವೆ. ಹತ್ತಾರು ಮಂದಿ ನಾಯಿ ಕಡಿತಕ್ಕೆ ತುತ್ತಾಗಿದ್ದಾರೆ.ಇಷ್ಟೆಲ್ಲ ಆದರೂ ಬೀದಿ ನಾಯಿಗಳ ಹಾವಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆ ಮತ್ತು ಚೌಡೇಶ್ವರಿ ನಗರ ಹಾಗೂ ಕುರುಬರಹಳ್ಳಿಯಲ್ಲಿ ನಾಯಿಗಳ ಕಾಟದಿಂದ ಜನ ರೋಸಿ ಹೋಗಿದ್ದಾರೆ.
ನಾಯಿಕಾಟ ಕುರಿತಂತೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಯಿಗಳ ಕಾಟ ಮಿತಿಮೀರಿರುವುದರಿಂದ ಮಕ್ಕಳು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ ಸ್ಥಳೀಯರು.
ಹಿಂಡು ಹಿಂಡಾಗಿ ರಸ್ತೆಗೆ ದಾಂಗುಡಿ ಇಡುವ ನಾಯಿಗಳು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗಿ ಕಚ್ಚಲು ಮುಂದಾಗುತ್ತಿವೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಯಿಂದ ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ನಿಯಂತ್ರಣ ಅಸಾಧ್ಯ: ಯಾವುದೇ ನಾಯಿಗಳನ್ನು ಹಿಡಿದು ಕೊಲ್ಲುವಂತಿಲ್ಲ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ದುಬಿಡುವಂತಿಲ್ಲ ಎಂಬ ನ್ಯಾಯಾಲಯದ ಆದೇಶದಿಂದಾಗಿ ನಾಗರಿಕರ ನಿದ್ದೆಗೆಡಿಸಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ನ್ಯಾಯಾಲಯದ ಆದೇಶದಿಂದ ಬೀದಿ ನಾಯಿಗಳಿಗೆ ನಿಯಂತ್ರಣ ಹಾಕಲು ಸಾಧ್ಯವಾಗುತ್ತಿಲ್ಲ. ಆದರೆ, ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಲಾಗುತ್ತಿದೆ. ಇದನ್ನು ಬಿಟ್ಟು ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
ಆದರೆ, ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸುವ ಹೊಣೆ ಹೊತ್ತಿರುವ ಸ್ವಯಂಸೇವಾ ಸಂಸ್ಥೆಗಳು ಎಬಿಸಿ ಮಾಡಿಸುವ ಬದಲು ಸಾವಿರಾರು ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಸುಳ್ಳು ಲೆಕ್ಕ ಹೇಳಿ ಹಣ ಲಪಟಾಯಿಸುತ್ತಿರುವುದು ನಾಯಿಗಳ ಹೆಚ್ಚಳಕ್ಕೆ ಮತ್ತೊಂದು ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.
ನಾಯಿಗಳ ರಕ್ಕಸ ಪ್ರವೃತ್ತಿಗೆ ಕಾರಣವೇನು..? ಚಿಕನ್, ಮಟನ್, ಫಿಷ್ ಮಾರಾಟಗಾರರು ತಮ್ಮ ವ್ಯಾಪಾರ ಮುಗಿದ ಮೇಲೆ ಉಳಿಯುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ನಾಯಿಗಳು ರಕ್ಕಸ ಪ್ರಾಣಿಗಳಾಗಿ ಪರಿವರ್ತನೆಗೊಳ್ಳುತ್ತಿವೆ.
ಪ್ರತಿನಿತ್ಯ ಸಿಗುವ ಮಾಂಸದ ತ್ಯಾಜ್ಯ ತಿಂದು ರುಚಿ ಹತ್ತಿಸಿಕೊಂಡಿರುವ ನಾಯಿಗಳು ಒಂದು ದಿನ ಮಾಂಸ ದೊರೆಯದಿದ್ದರೆ ಮಕ್ಕಳ ಮೇಲೆ ದಾಳಿ ಮಾಡಲು ಮುಂದಾಗುತ್ತಿರುವುದೇ ಇಷ್ಟೆಲ್ಲ ಅನಾಹುತಗಳಿಗೆ ಕಾರಣ.
ಇದರ ಜತೆಗೆ ನಗರದಲ್ಲಿರುವ ಅಸಮರ್ಪಕ ಕಸ ವಿಲೇವಾರಿಯಿಂದಾಗಿ ಎಲ್ಲೆಂದರಲ್ಲಿ ತ್ಯಾಜ್ಯ ಕಂಡುಬರುತ್ತಿರುವುದರಿಂದ ನಾಯಿಗಳ ಹಾವಳಿ ದಿನೇ ದಿನೇ ದ್ವಿಗುಣಗೊಳ್ಳುತ್ತಿದೆ.
ಡಿ.8ರಂದು ಕಾಂಗ್ರೇಸ್ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ:
ಬೆಂಗಳೂರು, ಡಿ.1- ಕ್ಷೇತ್ರದ ಅನುದಾನ, ಅಭಿವೃದ್ಧಿ ಕೆಲಸಗಳು, ಇನ್ನಿತರ ಬೇಡಿಕೆಗಳ ಕುರಿತು ಚರ್ಚಿಸುವ ಸಂಬಂಧ ಇದೇ ಡಿ.8ರಂದು ಕರೆದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಪಾಲ್ಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.
ಮಾಜಿ ಮುಖ್ಯಮಂತ್ರಿ, ವಿಧಾನಸೌಧ ಶಿಲ್ಪಿ ಕೆಂಗಲ್ ಹನುಮಂತಯ್ಯನವರ 38ನೆ ಪುಣ್ಮತಿಥಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ 8ರಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಸಭೆಯಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಶಾಸಕರ ಕ್ಷೇತ್ರದ ಸಮಸ್ಯೆಗಳು, ಅನುದಾನ, ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.
ಕೆಂಗಲ್ ಹನುಮಂತಯ್ಯನವರು ಪ್ರಾಮಾಣಿಕ ಮತ್ತು ಹಿರಿಯ ರಾಜಕಾರಣಿ.ಅತ್ಯಂತ ಆಸಕ್ತಿ ವಹಿಸಿ ವಿಧಾನಸೌಧವನ್ನು ನಿರ್ಮಿಸಿದರು. ವಿಧಾನಸೌಧ ದೇಶಕ್ಕೆ ಅಲ್ಲದೆ, ವಿಶ್ವಕ್ಕೇ ಮಾದರಿಯಾದ ಕಟ್ಟಡವಾಗಿದೆ. ಅವರ ತತ್ವಾದರ್ಶಗಳು ನಮಗೆ ಇಂದಿಗೂ ಅನುಕರಣೀಯ ಎಂದು ಗುಣಗಾನ ಮಾಡಿದರು.