ವಾಯುಮಾಲಿನ್ಯ ನಿಯಂತ್ರಣ ಮತ್ತು ಅಪಘಾತಗಳನ್ನು ತಡೆಗಟ್ಟಲು ಕ್ರಮ ಕೈಗೊಂಡ ಸಾರಿಗೆ ಇಲಾಖೆ

ಬೆಂಗಳೂರು, ನ.30-ದಿನೇ ದಿನೇ ಹೆಚ್ಚಾಗುತ್ತಿರುವ ವಾಯುಮಾಲಿನ್ಯ ನಿಯಂತ್ರಣ ಹಾಗೂ ಅಪಘಾತಗಳನ್ನು ತಡೆಗಟ್ಟಲು ಸಾರಿಗೆ ಇಲಾಖೆ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಂಡಿದೆ ಎಂದು ಅಪರ ಸಾರಿಗೆ ಆಯುಕ್ತ ಸಿ.ಪಿ.ನಾರಾಯಣಸ್ವಾಮಿ ತಿಳಿಸಿದರು.
ಜ್ಞಾನಭಾರತಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಮಿತಿಮೀರಿರುವ ಅಪಘಾತಗಳನ್ನು ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಪಘಾತಗಳಿಗೆ ಕಡಿವಾಣ ಹಾಕಲು ನಮ್ಮ ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.

ಎಂಟನೇ ತರಗತಿಯವರೆಗೆ ಇರುವ ರಸ್ತೆ ಸುರಕ್ಷತೆ ವಿಷಯವನ್ನು ದ್ವಿತೀಯ ಪಿಯುಸಿ ವರೆಗೆ ಶಾಲಾ ಕಾಲೇಜು ಪಠ್ಯದಲ್ಲಿ ಅಳವಡಿಸುವಂತೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಜೊತೆಗೆ ಇದನ್ನು ಕಾರ್ಯಗತಗೊಳಿಸಲು ಈ ಇಲಾಖೆಗೆ 25 ಲಕ್ಷ ರೂ. ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಕರು ಮತ್ತು ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ಗಳಿಗೆ ರಸ್ತೆ ಸುರಕ್ಷತೆ ಸಂಬಂಧ ತರಬೇತಿ ನೀಡಲಾಗುತ್ತದೆ. ವಿಪರೀತ ಹೊಗೆ ಉಗುಳುವ ವಾಹನಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಮೂಲಕ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುತ್ತಿದ್ದೇವೆ ಎಂದು ತಿಳಿಸಿದರು.

ಪರಿಸರ ಮತ್ತು ಇ-ಆಡಳಿತ ಜಂಟಿ ಸಾರಿಗೆ ಆಯುಕ್ತರಾದ ಓಂಕಾರೇಶ್ವರಿ ಮಾತನಾಡಿ, ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ ಖರೀದಿಗೆ ಸರ್ಕಾರ ರಸ್ತೆ ತೆರಿಗೆ ಹಾಕುತ್ತಿಲ್ಲ. ಹಾಗಾಗಿ ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಂಡು ವಿದ್ಯುತ್ ವಾಹನಗಳನ್ನೇ ಖರೀದಿಸುವ ಮೂಲಕ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಹೇಮಂತ್‍ಕುಮಾರ್ ಮಾತನಾಡಿ, ಪ್ರತಿವರ್ಷ 2007 ರಿಂದ ನವೆಂಬರ್ ತಿಂಗಳಲ್ಲಿ ವಾಯುಮಾಲಿನ್ಯ ತಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ ಶಾಲಾಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ಚಿತ್ರಸ್ಪರ್ಧೆ, ಚರ್ಚಾಸ್ಪರ್ಧೆ ಏರ್ಪಡಿಸಿ ವಾಯುಮಾಲಿನ್ಯ ತಡೆಗಟ್ಟುವುದು ಹೇಗೆ ? ಪರಿಸರ ರಕ್ಷಿಸುವುದು ಹೇಗೆ?ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಇಷ್ಟೇ ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಹಂಚುವ ಮೂಲಕ ಇಂಧನ ಬಳಕೆಯ ವಾಹನಗಳು ಉಗುಳುವ ವಿಷಾನಿಲಗಳಿಂದ ಮನುಷ್ಯನ ಆರೋಗ್ಯದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮ ಮತ್ತು ಪರಿಸರಕ್ಕೆ ಹಾನಿಯಾಗುವುದನ್ನು ವಿವರಿಸಲಾಗುತ್ತಿದೆ ಎಂದರು.
ವಾಹನ ಸವಾರರು ಕನಿಷ್ಠ 6 ತಿಂಗಳಿಗೊಮ್ಮೆ ನಿಯಮಿತವಾಗಿ ಮಾಲಿನ್ಯ ತಪಾಸಣೆ ನಡೆಸಿ ಹೊಗೆ ಉಗುಳದಂತೆ ಸದಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಆರ್‍ಟಿಒಗಳಾದ ಮಂಜುನಾಥ್, ಚಂದ್ರಉಪ್ಪಾರ್, ಮೋಟಾರು ವಾಹನ ನಿರೀಕ್ಷಕರಾದ ವಿನಯ ಚೌಧರಿ, ವಿಶ್ವನಾಥಶೆಟ್ಟಿ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ