ಹೊಸದಿಲ್ಲಿ: ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯುವಂತೆ ತಮಿಳುನಾಡು ರಾಜ್ಯ ಸರ್ಕಾರ ಶುಕ್ರವಾರ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದೆ.
ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಆರಂಭಿಕ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಸೂಚನೆ ಮೇರೆಗೆ ತಮಿಳುನಾಡು ಕಾನೂನು ತಂಡ ಸುಪ್ರೀಂಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದೆ.
“ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನ್ಯಾಯವಾಗಲಿದೆ. ತಮಿಳುನಾಡಿಗೆ ನಿಗದಿಪಡಿಸಿರುವ ನೀರಿನ ಪ್ರಮಾಣಕ್ಕೆ ಧಕ್ಕೆಯಾಗಲಿದ್ದು, ಇದರಿಂದ ರಾಜ್ಯಕ್ಕೆ ಪೂರ್ಣ ಪ್ರಮಾಣದ ನೀರು ಹರಿಯುವುದಿಲ್ಲ. ನದಿಯ ನೈಸರ್ಗಿಕ ಹರಿವಿನ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ, ಯೋಜನೆಯಿಂದ ಪರಿಸರದ ಮೇಲೆ ಧಕ್ಕೆ ಆಗಲಿದೆ. ಹೀಗಾಗಿ ಈ ಯೋಜನೆಗೆ ಒಪ್ಪಿಗೆ ನೀಡದಂತೆ ಕೇಂದ್ರಕ್ಕೆ ಸೂಚಿಸುವಂತೆ,” ತಮಿಳುನಾಡು ಅರ್ಜಿಯಲ್ಲಿ ಮನವಿ ಮಾಡಿದೆ.
ಇದೇ ವಿಚಾರವಾಗಿ ತಮಿಳುನಾಡು ಪ್ರಧಾನಿಗೂ ಕೂಡ ಪತ್ರ ಬರೆದು, ಯೋಜನೆಗೆ ಅನುಮತಿ ನೀಡದಂತೆ ಕೇಳಿಕೊಂಡಿತ್ತು. ಅದರ ಬೆನ್ನಲ್ಲೇ ಈಗ ಸುಪ್ರೀಂಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದೆ.