
ನವದೆಹಲಿ: ರೈತರ ಬೆಂಬಲವಿಲ್ಲದೇ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ, ಮೊದಲು ಅವರ ಸಮಸ್ಯೆ ಬಗೆಹರಿಸುವತ್ತ ಸರ್ಕಾರ ಗಮನ ಹರಿಸಲಿ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ಕಿಸಾನ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಚ್ ಡಿ ದೇವೇಗೌಡ ಅವರು, ‘ನಾವು ರೈತರ ಜೊತೆ ಇದ್ದೇವೆ. ರೈತರು ಬರ, ಬೆಳೆಗೆ ಉತ್ತಮ ಬೆಲೆಯಿಲ್ಲದೆ ಪರದಾಡುತ್ತಿದ್ದರೆ ಕೇಂದ್ರ ಸರ್ಕಾರ ಆ ಕಡೆಗೆ ಗಮನವನ್ನೇ ಹರಿಸುತ್ತಿಲ್ಲ. ರೈತರ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಯೋಚಿಸುತ್ತಿಲ್ಲ. ಆದರೆ, ಆ ಎಲ್ಲ ರೈತರ ಜೊತೆಯಲ್ಲಿ ನಾವಿದ್ದೇವೆ. ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳ ನಾಯಕರೂ ನಿಮ್ಮ ಜೊತೆಗಿದ್ದೇವೆ ಎಂದು ರೈತರಿಗೆ ಭರವಸೆ ನೀಡಿದರು.
ಅಂತೆಯೇ ಸರ್ಕಾರ ಎಂದೂ ರೈತರನ್ನು ನಿರ್ಲಕ್ಷ್ಯ ಮಾಡವಾರದು. ಅನ್ನದಾತರನ್ನು ನಿರ್ಲಕ್ಷ್ಯಿಸಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ರೈತರ ಬೆಂಬಲವಿಲ್ಲದೇ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಈ ಧೋರಣೆಯ ವಿರುದ್ಧ ನಾವೆಲ್ಲರೂ ರೈತರ ಪರವಾಗಿ ನಿಲ್ಲಲಿದ್ದೇವೆ ಎಂದು ದೇವೇಗೌಡ ಹೇಳಿದರು.
ಇನ್ನು ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಇತಿಹಾಸದಲ್ಲೇ ಅತಿದೊಡ್ಡ ರೈತರ ಪ್ರತಿಭಟನೆ ಇದಾಗಿಜದೆ. ಬೇರೆ ಬೇರೆ ರಾಜ್ಯಗಳ ಸುಮಾರು 200ಕ್ಕೂ ಅಧಿಕ ರೈತ ಸಂಘಟನೆಗಳು ಪ್ರತಿಭಟನನೆಗೆ ಕೈಜೋಡಿಸಿವೆ. ಒಂದು ಲಕ್ಷಕ್ಕೂ ಅಧಿಕ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದು ಸಂಜೆ ರೈತರೆಲ್ಲರೂ ರಾಮ್ ಲೀಲಾ ಮೈದಾನದಲ್ಲಿ ಸೇರಿ ಬಳಿಕ ಸಂಸತ್ ಗೆ ಮುತ್ತಿಗೆ ಹಾಕಿ ನ್ಯಾಯ ಕೇಳಲಿದ್ದಾರೆ ಎನ್ನಲಾಗಿದೆ.