ಬೆಂಗಳೂರು,ನ.30-ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುತ್ತಾರೆ.ಆದರೆ ಸಂವಿಧಾನ ಕೊಟ್ಟಿದ್ದೇ ಕಾಂಗ್ರೆಸ್. ಇದನ್ನು ಹೇಳುವ ನೈತಿಕತೆ ಬಿಜೆಪಿಯವರಿಗೆ ಎಲ್ಲಿದೆ.ಅವರು ಏನು ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ನಡೆದ ಸಂವಿಧಾನದ ಹಾದಿಯಲ್ಲಿ ಎಂಬ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರನ್ನು ಕೊಂದವರ ವಂಶದವರು ಬಿಜೆಪಿಯವರು. ಹಿಂದುತ್ವ ಎಂದು ಹೇಳುವವರೇ ಅಸಮಾನತೆ ಹುಟ್ಟು ಹಾಕಲು ಕಾರಣರಾಗಿದ್ದಾರೆ.ಧರ್ಮ-ಜಾತಿಯನ್ನು ನೂರಾರು ವರ್ಷಗಳಿಂದ ತುಂಬುತ್ತಿದ್ದಾರೆ. ಗುಲಾಮಗಿರಿಯಿಂದ ನಾವು ಇನ್ನು ಹೊರಬಂದಿಲ್ಲ ಎಂದು ವಿಷಾದಿಸಿದರು.
ಆರ್ಎಸ್ಎಸ್ನವರಿಗೆ ಹಳೆ ವ್ಯವಸ್ಥೆಯೇ ಇರಬೇಕು ಎಂಬ ಭಾವನೆಯಿದೆ.ಏಕೆಂದರೆ ಎಲ್ಲಿಯವರೆಗೂ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೂ ಶೋಷಣೆ ಇದ್ದೇ ಇರುತ್ತದೆ.ಕಾಂಗ್ರೆಸ್ ಶಾಸಕರಿಗೆ ನಮ್ಮ ಸಾಧನೆ, ಸಂವಿಧಾನ, ವಿಚಾರಧಾರೆಯ ಬಗ್ಗೆ ಸ್ಪಷ್ಟತೆ ಇರಬೇಕು.ಬಿಜೆಪಿಯವರು ಏನೋ ಹೇಳಿದರು ಎಂದು ಗೊಂದಲಕ್ಕೀಡಾಗಬಾರದು.
ಬಿಜೆಪಿಯವರು ಗೋಹತ್ಯೆ ಬೇಡ ಎಂದು ಹೇಳುತ್ತಾರೆ.ಆದರೆ ಸಗಣಿ ಎತ್ತಿಲ್ಲ. ಕಸ ಸುರಿದಿಲ್ಲ. ಆದರೂ ಅದರ ಬಗ್ಗೆ ಮಾತನಾಡುತ್ತಾರೆ ಎಂದು ಛೇಡಿಸಿದ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಡೆ ಮುಖ ಮಾಡಿ ನೀನು ಸಗಣಿ ಎತ್ತಿದ್ದೀಯೇನಪ್ಪ ಎಂದು ಪ್ರಶ್ನಿಸಿದರು. ಇದೇ ವೇಳೆ ಬಿ.ಎಲ್.ಶಂಕರ್ ಅವರನ್ನು ಕಿಚಾಯಿಸಿದಾಗ, ಈ ಇಬ್ಬರು ಇಲ್ಲ ಎಂದು ಉತ್ತರಿಸಿದರು.
ಸ್ವಾತಂತ್ರ್ಯ ಬಂದು 68 ವರ್ಷ ಕಳೆದಿದೆ.ಇದಕ್ಕೆ ಸಾಕಷ್ಟು ಮಂದಿ ಶ್ರಮಿಸಿದ್ದಾರೆ.ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಒದಗಿದಂತಾಗುತ್ತದೆ. ಅಧಿಕಾರ ಮತ್ತು ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.