ಬೆಂಗಳೂರು,ನ.29- ಪಕ್ಷದ ಕಚೇರಿಯಲ್ಲಿ ಇಂದು ನಡೆದ ಕೋರ್ಕಮಿಟಿ ಹಾಗೂ ಶಾಸಕಾಂಗ ಸಭೆಗೆ ಸುಮಾರು 40ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
ಇಂದು ಕೋರ್ ಕಮಿಟಿ ಮತ್ತು ಶಾಸಕಾಂಗ ಸಭೆ ನಡೆಸಲಾಗುವುದು ಎಂದು ಖುದ್ದು ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರೇ ಕೆಲ ದಿನಗಳಿಂದ ಮಾಹಿತಿ ನೀಡಿದ್ದರು. ಅಲ್ಲದೆ ಪ್ರತಿಯೊಬ್ಬರು ಕಡ್ಡಾಯವಾಗಿ ಭಾಗವಹಿಸಬೇಕೆಂದು ಸೂಚಿಸಿದ್ದರು.
ಆದರೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಉಮೇಶ್ಕತ್ತಿ, ಶ್ರೀರಾಮುಲು ಸೇರಿದಂತೆ 40ಕ್ಕೂ ಹೆಚ್ಚು ಶಾಸಕರು ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದರು.
ಅನ್ಯ ಕಾರ್ಯಕ್ರಮಗಳ ನಿಮಿತ್ತ ಶಾಸಕಾಂಗ ಸಭೆಗೆ ಬರಲು ಸಾಧ್ಯವಾಗಿಲ್ಲ ಎಂದು ರಾಜ್ಯಾಧ್ಯಕ್ಷರಿಗೆ ಈ ಎಲ್ಲ ಶಾಸಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಇದಕ್ಕೆ ಬಿಎಸ್ವೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ಎಷ್ಟೇ ಕೆಲಸ ಕಾರ್ಯಗಳಿರಲಿ, ಒತ್ತಡವಿರಲಿ ಶಾಸಕಾಂಗ ಸಭೆಗೆ ಗೈರುಹಾಜರಾದರೆ ಮಾಧ್ಯಮಗಳಲ್ಲಿ ನಾನಾ ರೀತಿ ವಿಶ್ಲೇಷಣೆ ಬರುತ್ತದೆ.ಇದಕ್ಕೆ ಅವಕಾಶ ನೀಡದೆ ಸಭೆಗೆ ಬಂದು ಕೆಲವೇ ನಿಮಿಷಗಳಲ್ಲಿ ಎದ್ದು ಹೋಗಿದ್ದರೂ ಸಮಸ್ಯೆ ಇರುತ್ತಿರಲಿಲ್ಲ. ಖುದ್ದು ನಾನೇ ಶಾಸಕಾಂಗ ಸಭೆಗೆ ಬರಬೇಕೆಂದು ಸೂಚಿಸಿದ್ದರೂ ಗೈರು ಹಾಜರಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಇನ್ನೊಂದು ಮೂಲದ ಪ್ರಕಾರ ಕೆಲವು ಶಾಸಕರು ರಾಜ್ಯಾಧ್ಯಕ್ಷರಿಗೆ ದೂರವಾನಿ ಮೂಲಕ ಮಾಹಿತಿ ನೀಡಿ ಗೈರುಹಾಜರಾಗುತ್ತಿರುವುದನ್ನು ಖಚಿತಪಡಿಸಿದ್ದರು.ಕ್ಷೇತ್ರದಲ್ಲಿ ಅಧಿಕೃತ ಕಾರ್ಯಕ್ರಮಗಳಿರುವುದರಿಂದ ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಯಾವುದೇ ರೀತಿಯ ವಿಶೇಷ ಅರ್ಥ ಬೇಡ ಎಂದು ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.