
ಬೆಂಗಳೂರು, ನ.29- ವಸತಿ ನಿಲಯಗಳಲ್ಲಿನ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿನೂತನ ಪರ್ವತಾರೋಹಣ ಸಾಹಸ ಚಾರಣ ತರಬೇತಿ ಕಾರ್ಯಕ್ರಮದಲ್ಲಿ 24 ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿವಿಧ ವಿದ್ಯಾರ್ಥಿನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 12 ಬಾಲಕರು, 12 ಬಾಲಕಿಯರು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆದ ಒಂದು ತಿಂಗಳ ಹಿಮಾಲಯ ಪರ್ವತಾರೋಹಣ ತರಬೇತಿಯಲ್ಲಿ ಭಾಗವಹಿಸಿದ್ದರು.
ಉತ್ತರ ಕಾಶಿಯಲ್ಲಿರುವ ಜವಹರಲಾಲ್ ನೆಹರು ಪರ್ವತಾರೋಹಣ ಸಂಸ್ಥೆಯ ನೇತೃತ್ವದಲ್ಲಿ ತರಬೇತಿ ನೀಡಲಾಯಿತು.ಹಿಮಾಲಯ ಶ್ರೇಣಿಯ ದುರ್ಗಮ ಬೆಟ್ಟಗಳಲ್ಲಿ 3500ರಿಂದ 5000 ಮೀಟರ್ ಎತ್ತರದಷ್ಟು ಬೆಟ್ಟಗಳ ಚಾರಣ ಮಾಡಿದ ಅನುಭವವನ್ನು ವಿದ್ಯಾರ್ಥಿಗಳು ಗಳಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಚಾರಣ ತರಬೇತಿ ಕಾರ್ಯಕ್ರಮಕ್ಕಾಗಿ ಇಲಾಖೆ 32.50 ಲಕ್ಷ ರೂ. ವೆಚ್ಚ ಮಾಡಿದ್ದು, ಬಾಲಕಿಯರ ತಂಡದ ಮೇಲುಸ್ತುವಾರಿಯನ್ನು ಮಂಡ್ಯ ವಿದ್ಯಾರ್ಥಿ ನಿಲಯದ ವಾರ್ಡ್ನ್ ನಿರ್ಮಲ ವಹಿಸಿದ್ದರು. ವಿದ್ಯಾರ್ಥಿಗಳ ಈ ಸಾಹಸ ಮನೋಭಾವಕ್ಕೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.