ಬೆಂಗಳೂರು,ನ.29- ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಸೋಲಿನಿಂದ ಧೃತಿಗೆಡದೆ ಮುಂದಿನ ಮಹಾಸಮರಕ್ಕೆ ಕಾರ್ಯಕರ್ತರನ್ನು ಹುರಿದುಂಬಿಸುವ ಮೂಲಕ ದೋಸ್ತಿ ಸರ್ಕಾರಕ್ಕೆ ಸೆಡ್ಡು ಹೊಡೆದು ಹೆಚ್ಚಿನ ಸ್ಥಾನ ಗಳಿಸಲು ಬಿಜೆಪಿ ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವೈಫಲ್ಯಗಳನ್ನೇ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಹೋರಾಟ ನಡೆಸಿ ಬೇರು ಮಟ್ಟದಿಂದ ಪಕ್ಷ ಸಂಘಟಿಸಲು ಕಾರ್ಯಕರ್ತರನ್ನು ಈಗಿನಿಂದಲೇ ಸಜ್ಜುಗೊಳಿಸಬೇಕೆಂದು ಶಾಸಕರಿಗೆ ಸೂಚಿಸಲಾಗಿದೆ.
ಮಲ್ಲೇಶ್ವರಂ ಕಚೇರಿಯಲ್ಲಿ ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಮತ್ತು ಶಾಸಕಾಂಗ ಸಭೆಯಲ್ಲಿ ಡಿ.10ರಿಂದ ಆರಂಭವಾಗಲಿರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಹಾಗೂ ರೈತರ ಸಾಲಮನ್ನಾ ಮಾಡದ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟ ಮಾಡಲು ತೀರ್ಮಾನ ಮಾಡಲಾಗಿದೆ.
ಕೋರ್ ಕಮಿಟಿ ಸದಸ್ಯರಾದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ನಳಿನ್‍ಕುಮಾರ್ ಕಟೀಲು, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ ಸೇರಿದಂತೆ ಮತ್ತಿತರ ನಾಯಕರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ನಡೆದ ಶಾಸಕಾಂಗ ಸಭೆಯಲ್ಲಿ ಪ್ರಮುಖವಾಗಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಯಾವುದೇ ಶಾಸಕರು ಸದನಕ್ಕೆ ಗೈರು ಆಗದೆ ಕಡ್ಡಾಯವಾಗಿ ಹಾಜರಾಗಬೇಕು. ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಂದಿಟ್ಟು ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಇಲಾಖಾ ಸಚಿವರಿಂದ ಉತ್ತರ ಪಡೆಯುವಂತೆ ಸೂಚಿಸಲಾಗಿದೆ.
ಸದನಕ್ಕೆ ಗೈರು ಹಾಜರಾದರೆ ಅಂಥ ಶಾಸಕರು ಉಭಯ ಸದನಗಳ ಮುಖ್ಯಸಚೇತಕರಿಗೆ ಮಾಹಿತಿ ನೀಡಬೇಕು. ಈ ಬಾರಿ ಅಧಿವೇಶನದಲ್ಲಿ ಶತಾಯಗತಾಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಎಲ್ಲರೂ ಸಜ್ಜಾಗಬೇಕೆಂದು ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಲಹೆ ಮಾಡಿದ್ದಾರೆ.
ಧೃತಿಗೆಡಬೇಡಿ:
ಇತ್ತೀಚೆಗೆ ನಡೆದ ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಿನ್ನಡೆಯಾಗಿರಬಹುದು. ಇದಕ್ಕೆ ಯಾರೊಬ್ಬರೂ ಧೃತಿಗೆಡದೆ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮುಖಂಡರು ಹೇಳಿದ್ದಾರೆ.
ಲೋಕಸಭೆ ಚುನಾವಣೆ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆಗಳಿರುವುದರಿಂದ ಹತಾಶರಾಗದೆ ಸ್ಫೂರ್ತಿಯಿಂದ ಲೋಕಸಭೆ ಚುನಾವಣೆಗೆ ಕೆಲಸ ಮಾಡುವಂತೆ ಶಾಸಕರಿಗೆ ತಿಳಿಹೇಳಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೂ ನಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಇನ್ನು ಇದೆ ಎಂಬುದಕ್ಕೆ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಬಂದಿರುವ 104 ಸ್ಥಾನಗಳೇ ಸಾಕ್ಷಿ.
ಮೋದಿಯ ಬಗ್ಗೆ ಕರ್ನಾಟಕದ ಜನತೆ ಸಾಕಷ್ಟು ಒಲವು ಇಟ್ಟುಕೊಂಡಿದ್ದಾರೆ.ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವಾಗಬೇಕು.
ಕನಿಷ್ಠ ಪಕ್ಷ ನಾವು 18ರಿಂದ 20 ಲೋಕಸಭಾ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಚುನಾವಣೆಗೆ ಧುಮುಕಬೇಕು. ಇದಕ್ಕಾಗಿ ಎಲ್ಲರೂ ಸಿದ್ಧತೆಯನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.