ಸಂಚಾರ ದಟ್ಟಣೆ ತಗ್ಗಿಸಲು ಎಲಿವೇಟೆಡ್ ರಸ್ತೆ ನಿರ್ಮಾಣ

ಬೆಂಗಳೂರು, ನ.29- ನಗರದ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಸಂಬಂಧ ಮೂರು ಮಾರ್ಗಗಳಲ್ಲಿ ಎಲಿವೇಟೆಡ್ ಕಾರಿಡಾರ್ ರಸ್ತೆ ನಿರ್ಮಾಣ ಕುರಿತ ಮಹತ್ವದ ಸಭೆ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಿತು.

ಒಂದು ಹೆಬ್ಬಾಳದಿಂದ ಸಿಲ್ಕ್‍ಬೋರ್ಡ್‍ವರೆಗೆ, ಇನ್ನೊಂದು ಕೆ.ಆರ್.ಪುರದಿಂದ ಭಟ್ಟರಹಳ್ಳಿ ಮಾರ್ಗವಾಗಿ ದಂಡು ನಿಲ್ದಾಣದವರೆಗೆ ಹಾಗೂ ಮತ್ತೊಂದು ಕುಂದನಹಳ್ಳಿ ಕ್ರಾಸ್‍ನಿಂದ ರಿಚ್‍ಮಂಡ್ ಸರ್ಕಲ್‍ವರೆಗೆ ನಿರ್ಮಿಸುವ ಎಲಿವೇಟೆಡ್ ರಸ್ತೆ ಯೋಜನೆ ಕುರಿತಂತೆ ಇಂದು ವಿಸ್ತೃತ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‍ಭಾಸ್ಕರ್, ಪೆÇಲೀಸ್, ಬಿಎಸ್‍ಎನ್‍ಎಲ್, ಪಿಡಬ್ಲ್ಯೂಡಿ, ರೈಲ್ವೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿರ್ಮಿಸುವ ಈ ಎಲಿವೇಟೆಡ್ ರಸ್ತೆಗಳು ಒಟ್ಟು 25ರಿಂದ 30 ಕಿ.ಮೀ.ವರೆಗೂ ನಿರ್ಮಾಣವಾಗಲಿದ್ದು, ಹೆಬ್ಬಾಳದಿಂದ ಸಿಲ್ಕ್‍ಬೋರ್ಡ್‍ವರೆಗೂ ಬರುವ ರಸ್ತೆ ಬ್ಯಾಪಿಸ್ಟ್ ಆಸ್ಪತ್ರೆ, ಮೇಕ್ರಿವೃತ್ತ, ಜಯಮಹಲ್, ಚಿನ್ನಸ್ವಾಮಿ ಕ್ರೀಡಾಂಗಣ, ಆಡುಗೋಡಿ ಮೂಲಕ ಸಿಲ್ಕ್ ಬೋರ್ಡ್ ತಲುಪಲಿದೆ.

ಕೆ.ಆರ್.ಪುರಂನಿಂದ ಆರಂಭವಾಗುವ ಮತ್ತೊಂದು ಎಲಿವೇಟೆಡ್ ರಸ್ತೆ ಭಟ್ಟರಹಳ್ಳಿ ಮೂಲಕ ಬಯ್ಯಪ್ಪನಹಳ್ಳಿ ಕೋಲ್ಸ್‍ಫಾರ್ಕ್‍ನಿಂದ ದಂಡು ಪ್ರದೇಶ ತಲುಪಲಿದೆ.

ಕುಂದನಹಳ್ಳಿ ಕ್ರಾಸ್‍ನಿಂದ ಮಾರತ್‍ಹಳ್ಳಿ ಮೂಲಕ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ರಿಚ್‍ಮಂಡ್ ಸರ್ಕಲ್ ತಲುಪುವ ರಸ್ತೆಗಳ ಯೋಜನೆ ರೂಪುರೇಷೆಯ ಬಗ್ಗೆ ಚರ್ಚಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ