ಅಧಿವೇಶನ ಆರಂಭಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ?; ಎಚ್​ಡಿಕೆ, ದೇವೇಗೌಡ, ಸಿದ್ದರಾಮಯ್ಯ ರಹಸ್ಯ ಸಭೆ

ಬೆಂಗಳೂರುಬಹು ನಿರೀಕ್ಷೆಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಲವು ತಿಂಗಳುಗಳಿಂದ ಒಂದಲ್ಲ ಒಂದು ಕಾರಣದಿಂದ ಮುಂದೂಡಿಕೆಯಾಗುತ್ತಲೇ ಇದೆ. ಇದರಿಂದಾಗಿ ಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿರುವ ಆಕಾಂಕ್ಷಿಗಳು ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಸಚಿವಾಕಾಂಕ್ಷಿಗಳು ಆಂತರಿಕವಾಗಿ ಬಂಡಾಯವೆದ್ದಿದ್ದು, ಸಂಪುಟ ವಿಸ್ತರಣೆಯನ್ನು ಇನ್ನು ತಡ ಮಾಡಿದರೆ, ಮೈತ್ರಿ ಸರ್ಕಾರಕ್ಕೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಅರಿತಿರುವ ಕಾಂಗ್ರೆಸ್​-ಜೆಡಿಎಸ್​ ಮುಖಂಡರು ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿಯೇ ಸಂಪುಟ ವಿಸ್ತರಣೆಗೆ ಪೂರ್ವಭಾವಿಯಾಗಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಖಾಸಗಿ ಹೋಟೆಲೊಂದರಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ವಿಧಾನ ಮಂಡಲ ಅಧಿವೇಶನ ಆರಂಭಕ್ಕೂ ಮೊದಲೇ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ ಎನ್ನಲಾಗುತ್ತಿದೆ.

ಸಂಪುಟ ವಿಸ್ತರಣೆ, ನಿಗಮ, ಮಂಡಳಿಗಳ ನೇಮಕ ಪ್ರಕ್ರಿಯೆ ಅಂತಿಮಗೊಳಿಸಲು ಎರಡು, ಮೂರು ದಿನಗಳಲ್ಲಿ ಸಮನ್ವಯ ಸಮಿತಿ ಸಭೆ ಸೇರಲಿದೆ. ಬಳಿಕ ಮುಂದಿನ ವಾರ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ರಾಜ್ಯ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳು ಬಗ್ಗೆಯೂ ದೇವೇಗೌಡರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಚರ್ಚೆ ನಡೆಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ