ಹೃದಯಾಘಾತದಿಂದ ಕೆಜಿಎಫ್ ಮಾಜಿ ಶಾಸಕ, ಜೆಡಿಎಸ್​ ಮುಖಂಡ ಎಂ ಭಕ್ತವತ್ಸಲಂ ನಿಧನ

ಬೆಂಗಳೂರು: ಕೆಜಿಎಫ್ ಮಾಜಿ ಶಾಸಕ ಎಂ ಭಕ್ತವತ್ಸಲಂ (70) ಅವರು ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಭಕ್ತವತ್ಸಲಂ ಅವರ ನಿಧನಕ್ಕೆ  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ.

ಕೆಜಿಎಫ್‍ನ ರಾಬರ್ಟ್ ಸನ್ ಪೇಟೆಯಲ್ಲಿ ವಾಸವಿದ್ದ ಅವರಿಗೆ ಮನೆಯಲ್ಲಿ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ನಂತರ ಕುಟುಂಬ ಸದಸ್ಯರು ಅವರನ್ನು ಜಿಲ್ಲಾ ಕೇಂದ್ರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ 11 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಕೆಜಿಎಫ್ ನಗರಸಭಾ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಭಕ್ತವತ್ಸಲಂ 1983ರಲ್ಲಿ ಎಐಎಡಿಎಂಕೆ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. 1985ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಪುನಃ 1989ರಲ್ಲಿ ಎಐಎಡಿಎಂಕೆ ಪಕ್ಷದಿಂದ 2ನೇ ಬಾರಿಗೆ ಮತ್ತು 1999ರಲ್ಲಿ 3ನೇ ಬಾರಿಗೆ ಶಾಸಕರಾದರು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಎಐಎಡಿಎಂಕೆ ತೊರೆದು ಜೆಡಿಎಸ್ ಸೇರಿದ ಅವರು 2008, 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ