ನಾಗ್ಪುರ: ಕೇಂದ್ರದ ತನಿಖಾ ದಳ ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಸಾವಿನ ಕುರಿತು ಅರ್ಜಿ ವಿಚಾರಣೆಯಿಂದ ವಿಭಾಗೀಯ ಪೀಠ ದೂರವಾದ ಹಿಂದೆಯೇ ಮುಂಬೈ ಹೈಕೋರ್ಟ್ ನಾಗ್ಪುರ ಪೀಠದ ಮತ್ತೊಬ್ಬ ನ್ಯಾಯಾಧೀಶರು ಸಹ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಈ ಪ್ರಕರಣದ ತನಿಖೆಗೆ ಮತ್ತೊಂದು ಅಡ್ಡಿಯಾಗಿದೆ.
ಸೋಹ್ರಾಬುದ್ದೀನ್ ಶೇಖ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಲೋಯಾ 2014ರಲ್ಲಿ ನಾಗ್ಪುರದ ಸರ್ಕಾರಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದಾಗ ಹೃದಯಾಘಾತದಿಂದ ನಿಧನರಾದರು. ಇವರ ಸಾವಿನ ಬಗ್ಗೆ ಕೆಲವು ಸಂಶಯಗಳು ವ್ಯಕ್ತವಾಗಿದ್ದವು.
ಇದಾದ ಬಳಿಕ ನಕಲಿ ಎನ್ಕೌಂಟರ್ ಪ್ರಕರಣ ನಡೆದ ವೇಳೆ ಗುಜರಾತ್ ಗೃಹ ಸಚಿವರಾಗಿದ್ದ ಈಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಲಾಗಿತ್ತು.
ನ್ಯಾ.ಲೋಯಾ ಸಾವಿನ ಕುರಿತು ವಕೀಲ ಸತೀಶ್ ಉಕೆ ಸಲ್ಲಿಸಿದ ಅರ್ಜಿ ನ.26ರಂದು ನ್ಯಾಯಮೂರ್ತಿಗಳಾದ ಎಸ್.ಬಿ.ಶುಕ್ರೆ ಮತ್ತು ಎಸ್.ಎಂ.ಮೊಡಕ್ ಅವರನ್ನೊಳಗೊಂಡ ವಿಭಾಗೀಯ ಪೀಠದೆದುರು ವಿಚಾರಣೆಗೆ ಬಂದಿತ್ತು. ಆದರೆ, ವಿಭಾಗೀಯ ಪೀಠ ವಿಚಾರಣೆಯಿಂದ ಹಿಂದೆ ಸರಿದಿದ್ದ ಕಾರಣ ಪ್ರಕರಣವು ನ್ಯಾಯಮೂರ್ತಿಗಳಾದ ಪಿ.ಎನ್.ದೇಶಮುಖ್ ಹಾಗೂ ಸ್ವಪ್ನಾ ಜೋಷಿ ಅವರ ಎದುರು ಬಂದಿತ್ತು. ಆದರೆ, ಇದೀಗ ಸ್ವಪ್ನಾ ಜೋಷಿ ತಾವು ಪ್ರಕರಣದಿಂದ ಹಿಂದೆ ಸರಿದಿದ್ದಾಗಿ ಘೊಷಿಸಿದ್ದಾರೆ.
ಲೋಯಾ ಅವರ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ರಕ್ಷಿಸಬೇಕೆಂದು ಉಕೆ ತಮ್ಮ ಅರ್ಜಿಯಲ್ಲಿ ವಿನಂತಿಸಿದ್ದಾರೆ. ಲೋಯಾ ಅವರ ಮರಣದ ತನಿಖೆಗಾಗಿ ಅವರು ಈಗಾಗಲೇ ನಾಗ್ಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಇದೆಲ್ಲದರ ನಡುವೆ ಲೋಯಾ ಸಹಜವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಸಂಬಂಧ ಸ್ವತಂತ್ರ ತನಿಖೆಯ ಬೇಡಿಕೆ ಸಲ್ಲಿಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಕಳೆದ ಏಪ್ರಿಲ್ನಲ್ಲಿ ತೀರ್ಪು ನೀಡಿದೆ.