ಬೆಂಗಳೂರು, ನ.28- ಇತ್ತೀಚೆಗೆ ನಿಧನರಾದ ಕೇಂದ್ರದ ಮೂವರು ಮಾಜಿ ಸಚಿವರ ಹೆಸರನ್ನು ಅಜರಾಮರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರು ಮನವಿ ಮಾಡಿದರು.
ಇತ್ತೀಚೆಗೆ ನಿಧನರಾದ ಅನಂತ್ಕುಮಾರ್, ಅಂಬರೀಷ್ ಮತ್ತು ಜಾಫರ್ ಶರೀಫ್ ಅವರಿಗೆ ಪಾಲಿಕೆ ಸಭೆಯಲ್ಲಿ ಇಂದು ಶ್ರದ್ಧಾಂಜಲಿ ಸಲ್ಲಿಸಿ ಎರಡು ನಿಮಿಷ ಮೌನ ಆಚರಿಸಿ ನಂತರ ನಾಳೆಗೆ ಸಭೆಯನ್ನು ಮುಂದೂಡಲಾಯಿತು.
ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ಅಗಲಿದ ನಾಯಕರ ಗುಣಗಾನ ಮಾಡಿದರು.
ರಾಜಕಾರಣದಲ್ಲಿ ನವೆಂಬರ್ ಕರಾಳ ತಿಂಗಳಾಗಿದೆ. ಮೊದಲು ಅನಂತ್ಕುಮಾರ್, ನಂತರ ಅಂಬರೀಷ್ ನಿಧನರಾದರು.ಅಂಬರೀಷ್ ನಿಧನದ ಬೆನ್ನಲ್ಲೇ ಸಿ.ಕೆ.ಜಾಫರ್ ಶರೀಫ್ ನಿಧನರಾದರು.ಈ ಮೂವರನ್ನು ಸದಾ ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ಅನಂತ್ಕುಮಾರ್ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವೆÅಟ್ರೋ ರೈಲು, ಜನೌಷಧಿ ಮಳಿಗೆ, ಕಡಿಮೆ ಬೆಲೆಗೆ ಬೇವು ಮಿಶ್ರಿತ ರಾಸಾಯನಿಕ ಗೊಬ್ಬರ ವಿತರಿಸಲು ಕ್ರಮ ಕೈಗೊಂಡಿದ್ದರು. ಹೃದಯ ರೋಗಿಗಳಿಗೆ ಕಡಿಮೆ ಬೆಲೆಗೆ ಸ್ಟಂಟ್ ಅಳವಡಿಸುವಂತಹ ಪ್ರಮುಖ ಯೋಜನೆಯ ರೂವಾರಿಯಾಗಿದ್ದರು.
ಕನ್ನಡ ಭಾಷೆ ಬಗ್ಗೆ ಅವರಿಗೆ ಅಪಾರ ಪ್ರೇಮವಿತ್ತು. ವಿಶ್ವಸಂಸ್ಥೆಯಲ್ಲಿ ಕನ್ನಡ ಮಾತನಾಡುವ ಮೂಲಕ ವಿಶ್ವದಲ್ಲಿ ಕನ್ನಡ ಡಿಂಡಿಮ ಬಾರಿಸಿದ್ದರು.ಒಳಿತು ಮಾಡು ಮನುಜ ಇರುವುದು ಮೂರೇ ದಿವಸ ಎಂಬಂತೆ ಇದ್ದರು.ಅವರು ಸೋಲಿಲ್ಲದ ಸರದಾರನಾಗಿದ್ದರು.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆರು ಬಾರಿ ಗೆಲುವು ಸಾಧಿಸಿ ರಾಜ್ಯಕ್ಕೆ, ದೇಶಕ್ಕೆ ಸೇವೆ ಸಲ್ಲಿಸಿ ಜನಮನ ಗೆದ್ದಿದ್ದರು ಎಂದು ಗುಣಗಾನ ಮಾಡಿದರು.
ಅಂಬರೀಷ್ ಅವರೂ ಸಹ ಆರೂವರೆ ಕೋಟಿ ಕನ್ನಡಿಗರ ಹೃದಯ ಸಾಮ್ರಾಜ್ಯ ಕಟ್ಟಿದ್ದರು.ಕೇಂದ್ರ ಮತ್ತು ರಾಜ್ಯ ಸಚಿವರಾಗಿ ತಮ್ಮ ಕೈಲಾದ ಸೇವೆ ಸಲ್ಲಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.ಕಲಾವಿದರಾಗಿ ಅಪಾರ ಜನಮನ್ನಣೆ ಪಡೆದಿದ್ದಾರೆ ಎಂದು ಸ್ಮರಿಸಿದರು.
ಜಾಫರ್ ಶರೀಫ್ ಅವರು ತಮ್ಮ 10ನೆ ವಯಸ್ಸಿಗೆ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ರಾಜಕಾರಣದಲ್ಲಿ ಬಹು ಎತ್ತರದ ಸ್ಥಾನ ಗಳಿಸಿದ್ದರು. ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ಸಮಕಾಲೀನ ರಾಜಕಾರಣಿಯಾಗಿದ್ದರು.ರೈಲ್ವೆ ಸಚಿವರಾಗಿ ಇಲಾಖೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದರು.ನ್ಯಾರೋಗೇಜ್ನಿಂದ ಬ್ರಾಡ್ಗೇಜ್ಗೆ ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಇಂತಹ ಮೂವರು ಮಹನೀಯರ ಹೆಸರನ್ನು ಶಾಶ್ವತವಾಗಿರುವಂತೆ ಮಾಡುವುದು ನಮ್ಮ ಕರ್ತವ್ಯ.ಕಟ್ಟಡಗಳು, ರಸ್ತೆಗಳು ಅಥವಾ ಅವರು ವಾಸ ಮಾಡುತ್ತಿದ್ದ ಸ್ಥಳಗಳಿಗೆ ಅವರ ಹೆಸರು ನಾಮಕರಣ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಕೋರಿದರು.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, 2018 ನವೆಂಬರ್ನಲ್ಲಿ ನಿಜಕ್ಕೂ ನಮ್ಮ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ.ದೇಶದ ಮೂರು ಅಮೂಲ್ಯ ರತ್ನಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.
ಅನಂತ್ಕುಮಾರ್, ಅಂಬರೀಷ್, ಸಿ.ಕೆ.ಜಾಫರ್ಶರೀಫ್ ಅವರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದವರು.ಅನಂತ್ಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆರು ಬಾರಿ ಸಂಸದರಾಗಿ ಆಯ್ಕೆಯಾಗಿ ದಕ್ಷ ಆಡಳಿತಗಾರರಾಗಿದ್ದರು.ರಾಜ್ಯಕ್ಕೆ ಯಾವುದೇ ಕೆಲಸ ಆಗಬೇಕಿದ್ದರೂ, ಮುಖ್ಯಮಂತ್ರಿ ಯಾರೇ ಆಗಿದ್ದರೂ ಅವರ ಬೆಂಬಲವಾಗಿ ನಿಲ್ಲುತ್ತಿದ್ದರು. ಅವರ ಸಾವು ನಗರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದರು.
ಕಾವೇರಿ ವಿಚಾರದಲ್ಲಿ ಅನಂತ್ಕುಮಾರ್ ಸಾಕಷ್ಟು ಮುತುವರ್ಜಿ ವಹಿಸಿದ್ದರು.ಮೇಕೆದಾಟು ಯೋಜನೆ ಜಾರಿ ಮಾಡಲು ಸಾಕಷ್ಟು ಶ್ರಮ ಪಟ್ಟಿದ್ದಾರೆ.ಈಗ ಅವರ ಆಸೆ ಈಡೇರಿದಂತಾಗಿದೆ.ಬೆಂಗಳೂರು ಮೆಟ್ರೋ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಎಲ್ಲ ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ಸಿಗುವಂತೆ ಮಾಡಿದ್ದಾರೆ.ಜನೌಷಧಿ ಕೇಂದ್ರ ಪ್ರಾರಂಭಿಸಿ ಬಡ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಗುಣಗಾನ ಮಾಡಿದರು.
ಅದಮ್ಯ ಚೇತನ ಸಂಸ್ಥೆಯಡಿ 2 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ಕೊಡುವ ಮೂಲಕ ರಾಷ್ಟ್ರದಲ್ಲಿ ಯಾವುದೇ ರಾಜಕೀಯ ವ್ಯಕ್ತಿ ಮಾಡದ ಕೆಲಸವನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.
ಅಂಬರೀಷ್ ಅವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿದ್ದಾರೆ.ಅವರ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಜನ ಸಾಗರ ಹರಿದುಬಂದದ್ದು ನೋಡಿದರೆ ಅವರೆಂತಹ ಅಭಿಮಾನಿ ಬಳಗ ಹೊಂದಿದ್ದರು ಎಂಬುದು ಗೊತ್ತಾಗುತ್ತದೆ.ಅವರು ನನ್ನ ಒಳ್ಳೆಯ ಸ್ನೇಹಿತ ಕೂಡ.ಕೇಂದ್ರ ಸಚಿವರಾಗಿ ತಮ್ಮದೇ ಹೋರಾಟ ಮಾಡಿದ್ದರು.ಅವರು ಪ್ರೀತಿಯಿಂದ ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸುತ್ತಿದ್ದರು ಎಂದು ಕೊಂಡಾಡಿದರು.
ಜಾಫರ್ ಶರೀಫ್ ಕೂಡ ಆರು ಬಾರಿ ಸಂಸದರಾಗಿದ್ದರು. ಹಲವಾರು ಖಾತೆಗಳನ್ನು ನಿಭಾಯಿಸಿದ್ದಾರೆ. ಅವರು ಅಲ್ಪಸಂಖ್ಯಾತ ವ್ಯಕ್ತಿಯಾಗಿದ್ದರೂ ಕೂಡ ಆರ್ಎಸ್ಎಸ್ಅನ್ನು ಪ್ರೀತಿಸುತ್ತಿದ್ದರು.ಹಲವು ಬಾರಿ ಆರ್ಎಸ್ಎಸ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.ಪಕ್ಷಭೇದ ಮರೆತು ಎಲ್ಲರನ್ನೂ ಪ್ರೀತಿಸುತ್ತಿದ್ದರು ಎಂದು ಗುಣಗಾನ ಮಾಡಿದರು.
ಈ ಮೂವರು ನಾಯಕರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪದ್ಮನಾಭರೆಡ್ಡಿ ಪ್ರಾರ್ಥಿಸಿದರು.
ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್, ಮಾಜಿ ಮೇಯರ್ಗಳಾದ ಕಟ್ಟೆ ಸತ್ಯನಾರಾಯಣ, ಮಂಜುನಾಥ್ ರೆಡ್ಡಿ, ಶಾಂತಕುಮಾರಿ, ಹಿರಿಯ ಸದಸ್ಯರಾದ ಗುಣಶೇಖರ್, ಉಮೇಶ್ ಶೆಟ್ಟಿ ಮತ್ತಿತರರು ಅಗಲಿದ ನಾಯಕರ ಗುಣಗಾನ ಮಾಡಿದರು.
ಮೇಯರ್ ಗಂಗಾಂಬಿಕೆ ಅವರು ಮೂವರು ನಾಯಕರಿಗೂ ಶ್ರದ್ಧಾಂಜಲಿ ಸಲ್ಲಿಸಿ ಸಭೆ ಮುಂದೂಡಿದರು.