ಹಾಕಿ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ; ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲು

ಭುವನೇಶ್ವರ: ಹಾಕಿ ಪುರುಷರ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಒಡಿಶಾ ರಾಜಧಾನಿ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‍ನ ಶಾರೂಕ್ ಖಾನ್, ಮಾಧುರಿ ದೀಕ್ಷಿತ್, ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಕೂಡ ಭಾಗಿಯಾಗಿದ್ದರು.

ಈ ಬಾರಿಯ ಟೂರ್ನಿಯಲ್ಲಿ 16 ತಂಡಗಳು ಸೆಣಸಲಿದ್ದು, ನಾಲ್ಕು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಕೆನಡಾ, ದಕ್ಷಿಣ ಆಫ್ರಿಕಾ, ಬೆಲ್ಜಿಯಂ ತಂಡಗಳೊಂದಿಗೆ ಭಾರತ ಟೂರ್ನಿಯ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಅರ್ಜೆಂಟೀನಾ, ನ್ಯೂಜಿಲೆಂಡ್, ಸ್ಪೇನ್, ಫ್ರಾನ್ಸ್ ತಂಡಗಳು ಎ, ಆಸ್ಟ್ರೇಲಿಯಾ, ಇಂಗ್ಲೆಂಡ್, ಐರ್ಲೆಂಡ್, ಚೀನಾ ತಂಡಗಳು ಬಿ ಹಾಗೂ ನೆದರ್ಲೆಂಡ್ಸ್, ಜರ್ಮನಿ, ಮಲೇಷ್ಯಾ, ಪಾಕಿಸ್ತಾನ ತಂಡಗಳು ಡಿ ಗುಂಪಿನಲ್ಲಿದೆ.

 

 

 

 

 

 

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಭುವನೇಶ್ವರದ ಕಳಿಂಗಾ ಸ್ಟೇಡಿಯಂನಲ್ಲಿ ಚಾಲನೆ ಸಿಗಲಿದ್ದು, ಮೊದಲ ಪಂದ್ಯ ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ಭಾರತ-ದಕ್ಷಿಣ ಆಫ್ರಿಕಾ ಹಾಗೂ ಬೆಲ್ಜಿಯಂ-ಕೆನಡಾ ತಂಡಗಳು ಮುಖಾಮುಖಿ ಆಗಲಿವೆ. ಹಾಕಿ ವಿಶ್ವಕಪ್‍ನ 14ನೇ ಆವೃತ್ತಿಯ ಟೂರ್ನಿಗೆ ಆತಿಥ್ಯವಹಿಸಿಕೊಂಡಿರುವ ಭಾರತದ ಒಮ್ಮೆ ಮಾತ್ರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದು, ಈ ಬಾರಿ ಭಾರತ ತವರು ಅಭಿಮಾನಿಗಳ ಬೆಂಬಲ ಸಿಗಲಿದೆ. ಉಳಿದಂತೆ ಭಾರತ 3ನೇ ಬಾರಿ ಹಾಕಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿದ್ದು, 8 ವರ್ಷಗಳ ನಂತರ ಈ ಬಾರಿ ಟೂರ್ನಿಯನ್ನು ನಡೆಸುತ್ತಿದೆ.

ಇತ್ತೀಚೆಗಷ್ಟೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಜತೆ ಜಂಟಿ ಚಾಂಪಿಯನ್ ಆಗಿದ್ದ ಭಾರತ, 1975ರಲ್ಲಿ ಮಲೇಷ್ಯಾದಲ್ಲಿ ನಡೆದ ವಿಶ್ವಕಪ್ ನಲ್ಲಿ ಟ್ರೋಫಿ ಗೆದ್ದಿತ್ತು. ಅಂದು ತಂಡದ ಸಾರಥ್ಯವಹಿಸಿದ್ದ ಅಜಿತ್ ಪಾಲ್ ಸಿಂಗ್ ಸಾರಥ್ಯದಲ್ಲಿ ಚೊಚ್ಚಲ ಚಾಂಪಿಯನ್ ಆಗಿದ್ದ ಭಾರತ ಬಳಿಕ 2ನೇ ಬಾರಿ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ. 43 ವರ್ಷಗಳಿಂದ ವಿಶ್ವಕಪ್ ಪದಕ ಪಡೆಯದ ಭಾರತಕ್ಕೆ ಈ ಬಾರಿ ತವರಿನ ಟೂರ್ನಿ ಚಾಂಪಿಯನ್ ಆಗಲು ಸುವರ್ಣಾವಕಾಶ ಲಭಿಸಿದ್ದು, ಮನ್ ಪ್ರೀತ್ ಸಿಂಗ್ ತಂಡದ ನಾಯಕತ್ವ ವಹಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ