ಮಧ್ಯಪ್ರದೇಶ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆ: ಮತದಾನ ಆರಂಭ

ನವದೆಹಲಿಭಾರೀ ಕುತೂಹಲ ಮೂಡಿಸಿರುವ ಮಧ್ಯಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬುಧವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.

ಮಧ್ಯಪ್ರದೇಶ ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆಯಲಿರುವ ಚುನಾವಣೆಗೆ 65 ಸಾವಿರ ಮತಕೇಂದ್ರಗಳಲ್ಲಿ ಮತದಾನ ನಡೆಯುತ್ತಿದೆ. ಅವುಗಳಲ್ಲಿ 2000 ಮತಗಟ್ಟೆಗಳು ಮಹಿಳೆಯರಿಂದ ನಿರ್ವಹಿಸುತ್ತಿವೆ. ಸುಮಾರು 3 ಲಕ್ಷ ಸರ್ಕಾರಿ ಉದ್ಯೋಗಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದು, ಇವರಲ್ಲಿ 45 ಸಾವಿರ ಮಹಿಳಾ ಉದ್ಯೋಗಿಗಳೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದ್ದು, ಇಡೀ ರಾಜ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ಇದಕ್ಕೆ ಮುಖ್ಯ ಕಳೆದ ಮೂರೂ ವರ್ಷಗಳಿಂದ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಿವರಾಜ್ ಸಿಂಗ್ ಚೌಹಾಣ್. ರಾಜ್ಯದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ನಿರ್ಮೂಲನೆಗೆ ಬಿಜೆಪಿ ಸಾಕಷ್ಟು ಶ್ರಮಿಸಿದ್ದು, ಬಡವರಿಗೆ, ದೀನ ದಲಿತರಿಗೆ ನೆರವಾಗುವಂಥ ಹಲವಾರು ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಚೌಹಾಣ್ ಜಾರಿಗೆ ತಂದಿದ್ದಾರೆ. ಅಷ್ಟೇ ಅಲ್ಲದೆ, ಇದುವರೆಗೂ ಅವರ ವಿರುದ್ಧ ಯಾವುದೇ ಪ್ರಕರಣಗಳೂ ಕೂಡ ದಾಖಲಾಗಿಲ್ಲ. ಇದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ಲಾಸ್ ಪಾಯಿಂಟ್ ಆಗಲಿದೆ.

ಮತ್ತೊಂದೆಡೆ ಕಾಂಗ್ರೆಸ್ ಕೂಡ ಈ ಬಾರಿ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಸಾಕಷ್ಟು ಕಸರತ್ತು ನಡೆಸಿದೆ. ಜನತೆಯಾ ವಿಶ್ವಾಸ ಗಳಿಸುವ ಸಲುವಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹಲವು ನೂತನ ಭರವಸೆಗಳನ್ನು ನೀಡಿದೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಹಿರಿಯ ನಾಯಕರಾದ ಜ್ಯೋತಿರಾದಿತ್ಯ ಸಿಂಧ್ಯಾ, ಕಮಲ್‌ನಾಥ್‌, ದಿಗ್ವಿಜಯ್‌ ಸಿಂಗ್‌ ಮತ್ತು ಅಜಿತ್‌ ಸಿಂಗ್‌ ನಾಲ್ವರೂ ಸೇರಿ ಒಗ್ಗತಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ದಲಿತರ ಮೇಲಿನ ದೌರ್ಜನ್ಯ ಕಾಯಿದೆಯ ದುರ್ಬಳಕೆಯ ಕುರಿತು ಅವರ ದ್ವಂದ್ವ ನಿಲುವು, ನಿರುದ್ಯೋಗ ಸಮಸ್ಯೆ ಇತ್ಯಾದಿಗಳನ್ನೇ ಬಂದವಾಳವಾಗಿಟ್ಟುಕೊಂಡು ಕಾಂಗ್ರೆಸ್ ಪ್ರಚಾರ ನಡೆಸಿದೆ. ಹೀಗಾಗಿ ಈ ಬಾರಿ ಮಧ್ಯಪ್ರದೇಶದ ಜನ ಬದಲಾವಣೆ ಬಯಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮಿಜೋರಾಂನಲ್ಲಿ ಕಾಂಗ್ರೆಸ್ ಹಾಗೂ ಎಂಎನ್​ಎಫ್​​ ಎಲ್ಲ 40 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿ 39 ಹಾಗೂ ಝೆಡ್​​ಪಿಎಂ 35 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಟ್ಟು 209 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಹಿಡಿತ ಸಾಧಿಸಿದ್ದರೆ, ಮಿಜೋರಾಂ ಕಾಂಗ್ರೆಸ್ ಅಧಿಕಾರದಲ್ಲಿರುವ ಏಕೈಕ ರಾಜ್ಯವಾಗಿದೆ. ಕ್ರೈಸ್ತ ಸಮುದಾಯದವರೇ ಹೆಚ್ಚಿರುವ ಮಿಜೋರಾಂನಲ್ಲಿ ಈವರೆಗೆ ಬಿಜೆಪಿ ಒಂದು ಕ್ಷೇತ್ರವನ್ನೂ ಗೆದ್ದಿಲ್ಲ. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂಬ ಹಟದಲ್ಲಿ ಬಿಜೆಪಿ ಪ್ರಚಾರ ನಡೆಸಿದೆ. ಈಗಾಗಲೇ ಮುಂಜಾನೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಲಿದೆ.

ಮಧ್ಯಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 11ಕ್ಕೆ ಪ್ರಕಟವಾಗಲಿದೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ