ಬೆಂಗಳೂರು,ನ.28- ಶಿವಮೊಗ್ಗ, ಸೊರಬ, ಶಿಕಾರಿಪುರ ಕ್ಷೇತ್ರಗಳ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಗಂದೂರು ಮೇಲ್ಸೇತುವೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿ ಹಲವು ತಿಂಗಳುಗಳೇ ಕಳೆದರೂ ಇದುವರೆಗೆ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ಈ ಬಗ್ಗೆಯೂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದಾಗ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ಚರ್ಚಿಸಿದ್ದಾರೆ. ಶೀಘ್ರವೇ ಈ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.ಇದು ನಮಗೆ ಸಮಾಧಾನ ತಂದಿದೆ ಎಂದು ಹೇಳಿದರು.
ಸಿಗಂದೂರು ಸೇತುವೆ ನಿರ್ಮಾಣಕ್ಕೆ ಅರಣ್ಯ ಸಚಿವರೊಂದಿಗೂ ಸಭೆ ನಡೆಸಿದ್ದಾರೆ ಎಂದು ಬಿಎಸ್ವೈ ತಿಳಿಸಿದರು.