15 ವರ್ಷದ ಹಳೆಯ ಬಸ್‍ಗಳ ಪರವಾನಗಿ ರದ್ದು

ಬೆಂಗಳೂರು,ನ.28-ಮಂಡ್ಯದಲ್ಲಿ ನಡೆದ ಬಸ್ ದುರಂತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ 15 ವರ್ಷಗಳಷ್ಟು ಹಳೆಯದಾದ ಡಕೋಟ ಬಸ್‍ಗಳನ್ನು ಶಾಶ್ವತವಾಗಿ ಗುಜರಿಗೆ ಸೇರಿಸಲು ಮುಂದಾಗಿದೆ.

15 ವರ್ಷಗಳಷ್ಟು ಹಳೆದಾಗಿರುವ ಬಸ್‍ಗಳ ಪರ್ಮಿಟ್(ಪರವಾನಗಿ) ರದ್ದುಪಡಿಸಿ ಅಂತಹ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಾರಿಗೆ ಇಲಾಖೆಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈಗಾಗಲೇ ಸಾರಿಗೆ ಇಲಾಖೆ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವ ಅವರು ಪರಾವನಗಿ ಪಡೆದು ಒಂದೂವರೆ ದಶಕದಷ್ಟು ಹಳೆಯದಾಗಿರುವ ಬಸ್‍ಗಳ ಪರ್ಮಿಟ್ ರದ್ದುಪಡಿಸಬೇಕು. ಈ ಬಸ್‍ಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲು ಹಿಂದೆಮುಂದೆ ನೋಡಬಾರದು.ಯಾರೇ ಇರಲಿ ಮುಲಾಜಿಲ್ಲದೆ ಕ್ರಮ ಜರುಗಿಸಿ ಎಂದು ಸೂಚಿಸಿದ್ದಾರೆ.

ಖುದ್ದು ಮುಖ್ಯಮಂತ್ರಿಗಳಿಂದಲೇ ಈ ಸೂಚನೆ ಹೊರಬೀಳುತ್ತಿದ್ದಂತೆ ಸಾರಿಗೆ ಇಲಾಖೆ ಅಧಿಕಾರಿಗಳು
ರಾಜಧಾನಿ ಬೆಂಗಳೂರು ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಲ್ಲಿ ಕಳೆದ ನಾಲ್ಕು ದಿನಗಳಿಂದಲೇ ಸದ್ದಿಲ್ಲದೆ ಪರ್ಮಿಟ್ ಮೀರಿರುವ ವಾಹನಗಳನ್ನು ಜಪ್ತಿ ಮಾಡುವ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ಮುಂದುವರೆದಿದೆ.
ಹಳೆ ವಾಹನಗಳು ಸಂಚರಿಸುವುದರಿಂದ ಹೆಚ್ಚು ಹೊಗೆ ಉಗುಳುತ್ತಿವೆ. ಇದರಿಂದ ಪರಿಸರದ ಮೇಲೆ ಭಾರೀ ಪರಿಣಾಮ ಬೀಳಲಿದ್ದು, ಮನುಷ್ಯರ ಆರೋಗ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಸಿತ್ತು.

ಹೀಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಅನೇಕ ವಾಹನಗಳನ್ನು ಜಪ್ತಿ ಮಾಡಿದ್ದು, ಮುಂದಿನ ದಿನಗಳಲ್ಲಿ ಡಕೋಟ ವಾಹನಗಳನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ಮುಂದುವರೆಸಲಿದೆ.

ಸರ್ಕಾರದಲ್ಲಿರುವ ಅನೇಕ ಪ್ರಭಾವಿ ಸಚಿವರು ಮತ್ತು ಶಾಸಕರ ಒಡೆತನದ ವಾಹನಗಳೇ ಕಾನೂನು ಬೀರಿ ಸಂಚರಿಸುತ್ತಿವೆ. ಪರ್ಮಿಟ್ ಪಡೆಯದೆ ಕಡಿಮೆ ಸಂಬಳಕ್ಕೆ ಚಾಲಕರು ಮತ್ತು ನಿರ್ವಾಹಕರನ್ನು ನೇಮಿಸಿಕೊಂಡು ಎಲ್ಲೆಂದರಲ್ಲಿ ಸಂಚಾರ ಮಾಡುವುದು ಬಹುತೇಕ ಪ್ರಭಾವಿ ಮುಖಂಡರ ಕಾಯಕವಾಗಿದೆ.
ಮಂಡ್ಯ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹಳೆ ವಾಹನಗಳನ್ನು ಶಾಶ್ವತವಾಗಿ ಗುಜರಿಗೆ ಸೇರಿಸಲು ಅಧಿಕಾರಿಗಳಿಗೆ ನಿರ್ದೇಶಿಸಿರುವುದು ಕೆಲವರಲ್ಲಿ ನಡುಕ ಹುಟ್ಟಿಸಿದೆ.

ಕಳೆದ ಶನಿವಾರ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನಮರಡಿಯಲ್ಲಿ ಖಾಸಗಿ ಬಸ್ಸೊಂದು ವಿಸಿ ನ್ಯಾಲೆಗೆ ಉರುಳಿಬಿದ್ದು 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
ಇದರಲ್ಲಿ ಶಾಲಾ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ವೃದ್ದರು ಸೇರಿದಂತೆ ಅನೇಕರಿದ್ದರು.ಈ ಘಟನೆಗೆ ಇಡೀ ಕರ್ನಾಟಕವೇ ಮರುಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ