ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಇಂದಿನಿಂದ ತಯಾರಿ ಆರಂಭ

ಬೆಂಗಳೂರು, ನ.28- ಮುಂಬರುವ ಲೋಕಸಭಾ ಚುನಾವಣೆಗೆ ಇಂದಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ ಜನಸಂಪರ್ಕಕ್ಕಾಗಿ ಪಾದಯಾತ್ರೆಯ ತಂತ್ರವನ್ನು ಅನುಸರಿಸಲು ನಿರ್ಧರಿಸಿದೆ.

ಪಕ್ಷದ ಪ್ರತಿ ಮಂಡಲ ವಿಭಾಗದಿಂದ 10 ಕಿಮೀ ದೂರದವರೆಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಆ ಭಾಗದ ಮತದಾರರನ್ನು ಸೆಳೆಯುವ ತಂತ್ರಕ್ಕೆ ಬಿಜೆಪಿ ಕೈಹಾಕಿದೆ.

ಆಯಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಶಾಸಕರು, ಸಂಸದರು ಸೇರಿದಂತೆ ಸುಮಾರು 50-60 ಬಿಜೆಪಿ ಸದಸ್ಯರು ಮಂಡಲ ವಿಭಾಗದಿಂದ ಪಾದಯಾತ್ರೆ ಆರಂಭಿಸಲಿದ್ದಾರೆ.10 ಕಿಮೀ ದೂರದಲ್ಲಿರುವ ಒಂದು ನಿರ್ದಿಷ್ಟ ಕೇಂದ್ರಕ್ಕೆ ತಲುಪುವರೆಗೂ ಜನರಲ್ಲಿ ಕೇಂದ್ರ ಎನ್‍ಡಿಎ ಸರ್ಕಾರದ ಸಾಧನೆಗಳನ್ನು ಮತ್ತು ಮುಂಬರುವ ಚುನಾವಣೆಯ ನಂತರ ಹಾಕಿಕೊಂಡಿರುವ ಯೋಜನೆಗಳನ್ನು ಮನಮುಟ್ಟುವಂತೆ ಪರಿಚಯಿಸುವರು. ಈ ಯೋಜನೆ 15 ದಿನಗಳ ಕಾಲ ನಡೆಯಲಿದ್ದು, ಡಿ.1 ರಿಂದ 15 ರವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಮಂಡಲದಲ್ಲೂ ಒಂದು ತಂಡವನ್ನು ರಚಿಸಿ, ಅದಕ್ಕೆ ಪ್ರತಿದಿನವೂ ಒಬ್ಬೊಬ್ಬ ದಿವಸ್ ಪ್ರಮುಖ ಎಂಬ ಹೆಸರಿನಲ್ಲಿ ಮುಖ್ಯಸ್ಥರನ್ನು ನೇಮಿಸಲಾಗುತ್ತದೆ. ಈ ಯಾತ್ರೆಗೆ ಅಗತ್ಯವಿರುವ ಎಲ್ಲಾ ತಯಾರಿಯನ್ನೂ ಬಿಜೆಪಿ ಈಗಾಗಲೇ ಮಾಡಿಕೊಂಡಿದೆ.

ಆಯಾ ಪ್ರದೇಶದ ಬಿಜೆಪಿ ಮುಖಂಡರ ಮನೆಯಲ್ಲೇ ರಾತ್ರಿ ನಾಯಕರು ತಂಗಲಿದ್ದು, ಅಲ್ಲಿನ ಜನರಿಗೆ ಸರ್ಕಾರದ ಬಗೆಗಿರುವ ಪ್ರತಿಕ್ರಿಯೆಯನ್ನು ಕಲೆಹಾಕುವ ಕೆಲಸವನ್ನೂ ಮಾಡುತ್ತಾರೆ.2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಈ ಪಾದಯಾತ್ರೆ ಫಲನೀಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ