ಬೆಂಗಳೂರು, ನ.27-ಟಿಪ್ಪು ಹೆಸರಿನ ರಾಜಕೀಯ ಸಮರ ಬಿಬಿಎಂಪಿಯಲ್ಲಿ ಮತ್ತೆ ಮುಂದುವರೆದಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಮತ್ತೊಂದು ಸುತ್ತಿನ ಧರ್ಮಯುದ್ಧ ನಡೆಯುವ ಲಕ್ಷಣಗಳು ಗೋಚರವಾಗಿವೆ.
ಟಿಪ್ಪು ಹೆಸರಿನಲ್ಲಿ ಪಾಲಿಕೆ ಸದಸ್ಯರು ಆರಂಭಿಸಿದ್ದ ರಾಜಕೀಯಕ್ಕೆ ಪ್ರಭಾವಿ ಸಚಿವರು ಕೈ ಜೋಡಿಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಸಿಗದಿದ್ದರೂ ಜಕ್ಕೂರು ವಾರ್ಡ್ ವೃತ್ತಕ್ಕೆ ಟಿಪ್ಪು ವೃತ್ತ ಎಂದು ಹೆಸರಿಡಲು ಮುಂದಾಗಿರುವುದಲ್ಲದೆ, ಹೊಸ ನಾಮಫಲಕದ ಬೋರ್ಡ್ ರಾರಾಜಿಸುತ್ತಿದೆ.
ಈ ಬಗ್ಗೆ ಮಾಹಿತಿ ಕೇಳಿದರೆ ಕೌನ್ಸಿಲ್ ಅನುಮೋದನೆಗೆ ಕಳುಹಿಸಲಾಗಿದೆ ಎನ್ನುತ್ತಾರೆ. ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆಯುವ ಮೊದಲೇ ಹೆಸರಿಡಬಹುದೇ? ಸಚಿವರಾದ ಕೃಷ್ಣಭೆರೇಗೌಡರೇ ಮುಂದೆ ನಿಂತು ಈ ಬೋರ್ಡ್ ಹಾಕಿಸಿರುವುದು ಸರಿಯೇ? ಸಚಿವರ ಈ ಕ್ರಮಕ್ಕೆ ಸ್ವಪಕ್ಷದವರಿಂದಲೇ ಅಸಮಾಧಾನ ವ್ಯಕ್ತವಾಗಿದೆ ಎಂದು ಕೇಳಿ ಬಂದಿದೆ.
ಕೌನ್ಸಿಲ್ನಲ್ಲಿ ಈ ವಿಷಯ ಚರ್ಚೆಗೆ ಬಂದಿಲ್ಲ ಎಂದು ಆಡಳಿತ ಪಕ್ಷದವರು ಹೇಳುತ್ತಾರೆ. ಸಚಿವರ ಈ ನಡೆಗೆ ಬಿಜೆಪಿ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ. ವಿಶ್ವ ಹಿಂದೂ ಪರಿಷತ್, ಸಚಿವರ ಈ ಕ್ರಮ ವಿರೋಧಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಟಿಪ್ಪು ಹೆಸರಿಡಲು ಬಿಡುವುದಿಲ್ಲ ಎಂದು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.
ಬಾಪೂಜಿನಗರ ವಾರ್ಡ್ನ ಕಾಂಗ್ರೆಸ್ ಸದಸ್ಯ ಐದು ರಸ್ತೆಗಳಿಗೆ ಮುಸ್ಲಿಮರ ಹೆಸರಿಟ್ಟಿದ್ದರು. ಗೋವಿಂದರಾಜನಗರ ವಾರ್ಡ್ನಲ್ಲಿ ಹಿಂದೂಗಳ ಹೆಸರಿಡಲು ಬಿಜೆಪಿ ಆಗ್ರಹಿಸಿತ್ತು. ಆಗ ಪರ-ವಿರೋಧ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಕಾಂಗ್ರೆಸ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಂತಾಗಿದೆ.
ಈ ಹಿಂದೆ ನಾಮಕರಣ ಮಾಡುವ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಕಿತ್ತಾಟ ಆರಂಭವಾಗಿ ತಣ್ಣಗಾಗಿತ್ತು. ಇದು ಮಾಸುವ ಮುನ್ನವೇ ಮತ್ತೊಂದು ವಿವಾದ ಉಂಟಾಗಿದೆ.
ಬಿಬಿಎಂಪಿಯಲ್ಲಿ ಪ್ರಾರಂಭವಾಗಿರುವ ಈ ಧರ್ಮಯುದ್ಧದಲ್ಲಿ ಯಾರಿಗೆ ಜಯ ಸಿಗಲಿದೆ ಎಂಬುದು ಸದ್ಯದಲ್ಲೇ ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ಗೊತ್ತಾಗಲಿದೆ.