ಬೆಂಗಳೂರು, ನ.27- ರೈತರ ಬೆಳೆ ವಿಮೆ ಹೆಸರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ನೇಹಿತರಾದ ಗೌತಮ್ ಅದಾನಿ ಮತ್ತು ಅನಿಲ್ ಅಂಬಾನಿ ಒಡೆತನದ ಖಾಸಗಿ ವಿಮಾ ಕಂಪೆನಿಗಳು ಮೂರೂವರೆ ವರ್ಷದಲ್ಲಿ 4.65 ಲಕ್ಷ ಕೋಟಿ ಲೂಟಿ ಮಾಡಿದ್ದು, ಇದು ಭಾರತ ಇತಿಹಾಸದಲ್ಲೇ ದೊಡ್ಡ ಹಗರಣ ಎಂದು ಕೆಪಿಸಿಸಿ ರೈತ ಘಟಕದ ಅಧ್ಯಕ್ಷ ಸಚಿನ್‍ಮಿಗಾ ಆರೋಪಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014-15ರಿಂದ 2018ರವರೆಗೆ ಪ್ರಧಾನಮಂತ್ರಿ ಫಸಲ್‍ಬಿಮಾ ಯೋಜನೆಯಡಿ ಭಾರೀ ಪ್ರಮಾಣದ ಹಗರಣ ನಡೆದಿದೆ. ಇದು ರಫೇಲ್ ಹಗರಣಕ್ಕಿಂತಲೂ ದೊಡ್ಡ ಹಗರಣವಾಗಿದೆ. ರೈತರಿಂದ ಲಕ್ಷಾಂತರ ಕೋಟಿ ವಿಮೆಯ ಹಣವನ್ನು ವಸೂಲಿ ಮಾಡಲಾಗಿದೆ. ರೈತರಿಗೆ ವಾಪಸ್ ನೀಡಿರುವುದು ಸ್ವಲ್ಪ ಪ್ರಮಾಣ ಮಾತ್ರ. ಉಳಿದದ್ದನ್ನು ಖಾಸಗಿ ಕಂಪೆನಿಗಳು ಲಾಭ ಮಾಡಿಕೊಂಡಿವೆ ಎಂದು ಅವರು ಗಂಭೀರ ಆರೋಪ ಮಾಡಿದರು.
2014-15ರಲ್ಲಿ ರೈತರಿಂದ 20ಸಾವಿರ ಕೋಟಿ ಬೆಳೆ ಹಣ ಪಾವತಿಯಾಗಿದೆ. ಇದರಲ್ಲಿ ರೈತರಿಗೆ ಪರಿಹಾರದ ರೂಪದಲ್ಲಿ ವಾಪಸ್ ನೀಡಿರುವುದು ಕೇವಲ 5ಸಾವಿರ ಕೋಟಿ ಮಾತ್ರ. ಇನ್ನುಳಿದ 15 ಸಾವಿರ ಕೋಟಿ ರೂ.ಗಳನ್ನು ಆರು ತಿಂಗಳ ಅವಧಿಯಲ್ಲಿ ಖಾಸಗಿ ಕಂಪೆನಿಗಳು ಲಾಭ ಮಾಡಿಕೊಂಡಿವೆ. 2015-16ರಲ್ಲಿ 1.15ಲಕ್ಷ ಕೋಟಿ, 2016-17ರಲ್ಲಿ 2.03 ಲಕ್ಷ ಕೋಟಿ, 2017-18ರಲ್ಲಿ 1.92ಲಕ್ಷ ಕೋಟಿ ಬೆಳೆ ವಿಮೆ ಕ್ರೂಢೀಕರಿಸಲಾಗಿದೆ. ಅದರಲ್ಲಿ ಮೂರು ವರ್ಷಗಳಿಂದಲೂ ಸೇರಿ ರೈತರಿಗೆ 41ಸಾವಿರ ಕೋಟಿ ಮಾತ್ರ ಪರಿಹಾರ ರೂಪದಲ್ಲಿ ನೀಡಲಾಗಿದೆ, ಉಳಿದ 4.65 ಲಕ್ಷ ಕೋಟಿ ಅದಾನಿ ಸಮೂಹ ಸಂಸ್ಥೆಗಳ ಒಡೆಯ ಗೌತಮ್ ಅದಾನಿ, ರಿಲೆಯೆನ್ಸ್ ಸಂಸ್ಥೆಯ ಮಾಲೀಕ ಅನಿಲ್ ಅಂಬಾನಿ ಅವರ ಕಂಪೆನಿಗಳಿಗೆ ಲಾಭವಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಬೆಳೆ ವಿಮೆಗಾಗಿ 20, 77,239 ರೈತರು ನೋಂದಣಿಯಾಗಿದ್ದರು. ರೈತರು ಸುಮಾರು 203 ಕೋಟಿ ರೂ.ಗಳ ವಿಮಾ ಕಂತನ್ನು ಪಾವತಿಸಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೇ.50ರ ಅನುಪಾತದಲ್ಲಿ ತಲಾ 752.94 ಕೋಟಿ ಪಾಲನ್ನು ಭರಿಸಿದ್ದವು. ಒಟ್ಟು 1708.92 ಕೋಟಿ ವಿಮಾ ಹಣ ಸಂಗ್ರಹವಾಗಿತ್ತು. ಅದರಲ್ಲಿ 3.10 ಲಕ್ಷ ಫಲಾನುಭವಿ ರೈತರಿಗೆ ಪಾವತಿಸಿರುವುದು 337 ಕೋಟಿ ಮಾತ್ರ. ಉಳಿದ 1371.75ಕೋಟಿ ಖಾಸಗಿ ಕಂಪೆನಿಗಳ ಪಾಲಾಗಿದೆ ಎಂದು ಅವರು ವಿವರಣೆ ನೀಡಿದರು.
ಈ ಹಗರಣದ ಬೆಗ್ಗೆ ಸಿಎಜಿ ಸ್ಪಷ್ಟವಾಗಿ ಮಾಹಿತಿ ನೀಡಿದ್ದು, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ ರೈತರಿಗಿಂತಲೂ ಖಾಸಗಿ ಕಂಪೆನಿಗಳಿಗೆ ಹೆಚ್ಚು ಲಾಭವಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರಧಾನಮಂತ್ರಿಯವರು ತಮ್ಮ ಉದ್ಯಮಿ ಸ್ನೇಹಿತರಿಗೆ ಅನುಕೂಲಮಾಡಿಕೊಡಲು ಈ ಯೋಜನೆಯನ್ನು ಜಾರಿಗೊಳಿಸಿದರು ಎಂದು ಆರೋಪಿಸಿರುವ ಸಚಿನ್ ಮಿಗಾ, ಇದು ರಫೇಲ್‍ಗಿಂತಲೂ ದೊಡ್ಡ ಹಗರಣ. ಸುಪ್ರೀಂಕೋರ್ಟ್‍ನ ಉನ್ನತ ಸಮಿತಿಯ ಮುಖಾಂತರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ರೈತರಿಗೆ ಆದ ಅನ್ಯಾಯ ತಡೆಗಟ್ಟಬೇಕೆಂದು ಮರು ಒತ್ತಾಯಿಸಿದರು.
ಈ ಹಗರಣದ ಬಗ್ಗೆ ಸಮಗ್ರ ಮಾಹಿತಿ ಇರುವ ಸಿಡಿ ಬಿಡುಗಡೆ ಮಾಡಿದ ಸಚಿನ್ ಮಿಗಾ ಅವರು, ಇದೇ ತಿಂಗಳ 30ರಂದು ದೆಹಲಿಯಲ್ಲಿ ಎಐಸಿಸಿಯ ಕಿಸಾನ್ ಘಟಕದ ಅಧ್ಯಕ್ಷ ನಾನಾಪಟೇಲ್ ದಾಖಲೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಿಸಾನ್ ಘಟಕದ ಸುಭಾಷ್‍ಚಂದ್ರ, ಅಂಜನ್‍ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.