ಬೆಂಗಳೂರು, ನ.27-ಜೆಡಿಎಸ್ ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ ಇಂದು ಬೆಳಗ್ಗೆ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರಕಾಶ್ ಅವರಿಗೆ 67 ವರ್ಷ ವಯಸ್ಸಾಗಿತ್ತು. ನವೆಂಬರ್ 20 ರಂದು ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಬೆಳಗ್ಗೆ 11.15ರ ಸಮಯದಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಸಣ್ಣಯ್ಯ ಹಾಗೂ ರಂಗಮ್ಮ ದಂಪತಿ ಪುತ್ರರಾಗಿ 1951ರ ಸೆಪ್ಟೆಂಬರ್ 13 ರಂದು ಎಚ್.ಎಸ್.ಪ್ರಕಾಶ್(ಹಾಸನ ಸಣ್ಣಯ್ಯ ಪ್ರಕಾಶ್) ಹಾಸನದಲ್ಲಿ ಜನಿಸಿದ್ದರು.
ಹಲವು ವರ್ಷಗಳ ಹಿಂದೆ ಪ್ರಕಾಶ್ ಅವರಿಗೆ ಲಿವರ್ ಮತ್ತು ಕಿಡ್ನಿಯ ಟ್ರಾನ್ಸ್‍ಪ್ಲಾಂಟೇಷನ್ ಸಹ ಮಾಡಲಾಗಿತ್ತು.
ಕಳೆದ 1994ರಿಂದ 2013ರವರೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 4 ಬಾರಿ ಚುನಾಯಿತರಾಗಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಕಾಶ್ ಅವರು ಪರಾಭವಗೊಂಡಿದ್ದರು.
1983ರಲ್ಲಿ ಹಾಸನ ನಗರಸಭಾ ಸದಸ್ಯರಾಗಿ, 1985-87ರಲ್ಲಿ ಹಾಸನ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪುಸ್ತಕ ಓದುವ, ಸಂಗೀತ ಕೇಳುವ ಹವ್ಯಾಸ ಹೊಂದಿದ್ದ ಇವರು ಕೃಷಿಕರೂ ಆಗಿದ್ದರು.