ಮುಂಬೈ ದಾಳಿ ವೇಳೆ ರಕ್ಷಣೆಗೆ ನಿಂತಿದ್ದ ನಾಲ್ಕು ನಾಯಿಗಳ ಹಿಂದಿದೆ ರೋಚಕ ಕಥೆ!

ಮುಂಬೈಮುಂಬೈ ಭಯೋತ್ಪಾದನಾ ದಾಳಿಯ ಕಹಿ ನೆನಪಿಗೆ ಇಂದಿಗೆ 10 ವರ್ಷ. ಈ ದಾಳಿಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನ ತೀವ್ರವಾಗಿ ಗಾಯಗೊಂಡು, ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚುತ್ತಿತ್ತೇನೋ. ಆದರೆ ಅದನ್ನು ತಡೆದಿದ್ದು ನಮ್ಮ ದೇಶದ ಸೈನಿಕರು. ಅವರ ಧೈರ್ಯವನ್ನು ನಾವು ಕೊಂಡಾಡುತ್ತೇವೆ. ಇದರ ಜತೆಗೆ ಜೀವ ರಕ್ಷಣೆಗೆ ಪಣ ತೊಟ್ಟ ಇನ್ನೂ ನಾಲ್ಕು ಹೀರೋಗಳ ಕಥೆಯನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಅವರು ಮತ್ತಾರೂ ಅಲ್ಲ, ಮುಂಬೈ ಪೊಲೀಸ್​ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದ ಶ್ವಾನಗಳು.

ಮ್ಯಾಕ್ಸ್​, ಟೈಗರ್​, ಸುಲ್ತಾನ್​ ಹಾಗೂ ಸೀಸರ್​ ಹೆಸರಿನ ಶ್ವಾನಗಳ ತಂಡ ಮುಂಬೈ ಪೊಲೀಸ್​​ ಕಚೇರಿಯ ಬಾಂಬ್​ ಶೋಧ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಈ ನಾಲ್ಕು ನಾಯಿಗಳು ಉತ್ತಮ ಗೆಳೆಯರು ಕೂಡ ಹೌದು. ಮುಂಬೈನಲ್ಲಿ ನಡೆದ ದಾಳಿ ನಂತರ ಮೂಲೆ ಮೂಲೆಯಲ್ಲೂ ಶೋಧ ನಡೆಸಿ ಬಾಂಬ್​ ಪತ್ತೆ ಹಚ್ಚಿತ್ತು ಈ ಶ್ವಾನ ತಂಡ.
26/11ರ ದಾಳಿಯ ಕಹಿ ಘಟನೆ ನೆನೆಯುವಾಗ ಮುಂಬೈ ಜನ ಪ್ರತಿ ಬಾರಿ ಈ ನಾಲ್ಕು ನಾಯಿಗಳನ್ನು ನೆನೆಯುತ್ತಾರೆ! ಮಿಲಿಟರಿ ಬಟ್ಟೆ ತೊಟ್ಟವರು ಮಾತ್ರವಲ್ಲದೇ ಈ ಸಾಲಿನಲ್ಲಿ ಒಂದು ನಾಯಿಗಳ ತಂಡವೂ ಇತ್ತು ಎಂಬುದನ್ನು ಮುಂಬೈ ಜನ ಬಲವಾಗಿ ನಂಬಿದ್ದಾರೆ.

ಹೀರೋಗಳ ಹಿನ್ನೆಲೆ
ಮ್ಯಾಕ್ಸ್​ ಹುಟ್ಟಿದ್ದು 2004ರಲ್ಲಿ. ಬಾಂಬ್​ ಶೋಧದಳ ಸೇರುವಾಗ ಆತ ಇನ್ನೂ ಚಿಕ್ಕವನಾಗಿದ್ದ. ಒಂದು ವರ್ಷಗಳ ಕಾಲ ಪುಣೆಯಲ್ಲಿ ತರಬೇತಿ ಪಡೆದು ಸೇವೆಗೆ ಸಿದ್ಧನಾಗಿಬಿಟ್ಟ. 26/11ರ ದಾಳಿ ಸಂದರ್ಭದಲ್ಲಿ ಮುಂಬೈನಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಅಡಗಿಸಿಟ್ಟ 8 ಕೆ.ಜಿ ಆರ್​ಡಿಎಕ್ಸ್​​, 25 ಗ್ರೆನೇಡ್​ ಪತ್ತೆ ಹಚ್ಚಿದ್ದ. ಮ್ಯಾಕ್ಸ್​ ಸಾಧನೆಯನ್ನು ಪರಿಗಣಿಸಿ ಆತನಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗಿತ್ತು!
ಸುಲ್ತಾನ್​ ಹಾಗೂ ಟೈಗರ್​ ಚಿಕ್ಕ ವಯಸ್ಸಿನಿಂದ ಗೆಳೆಯರು. ಗುರುಗ್ರಾಮದಲ್ಲಿ ಇಬ್ಬರೂ ತಮ್ಮ ಸೇವೆ ಆರಂಭಿಸಿದ್ದರು. ತಾಜ್​ ಹೋಟೆಲ್​ ಮೇಲೆ ದಾಳಿ ನಡೆದಾಗ ಹೋಟೆಲ್​ ಹೊರ ಭಾಗದಲ್ಲಿ ಕಾವಲಿಗೆ ನಿಂತಿದ್ದು ಇದೇ ಟೈಗರ್​. ಸೀಸರ್​ ಸಾಧನೆಯ ಪಟ್ಟಿ ಚಿಕ್ಕದೇನಿಲ್ಲ. ದಾಳಿ ನಡೆದ ನಂತರ ಹೋಟೆಲ್​ನಲ್ಲಿ 8 ಕೆಜಿ ಆರ್​ಡಿಎಕ್ಸ್​ ಹಾಗೂ ರೈಲ್ವೆ ನಿಲ್ದಾಣದಲ್ಲಿ ಎರಡು ಗ್ರೆನೇಡ್​ ಪತ್ತೆ ಹಚ್ಚಿ ಭೇಷ್​ ಎನಿಸಿಕೊಂಡಿದ್ದ.

ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ!
2016ರ ಏಪ್ರಿಲ್​ನಲ್ಲಿ ಮ್ಯಾಕ್ಸ್​ ಮೃತಪಟ್ಟ. ಆತನನನ್ನು ಹೂತ ಸ್ಥಳಕ್ಕೆ ಈ ಮೂವರು ಆಗ್ಗಾಗ ಭೇಟಿ ನೀಡುತ್ತಿದ್ದರು! ಅದೇ ವರ್ಷ ಜೂನ್​ ತಿಂಗಳಲ್ಲಿ ಸುಲ್ತಾನ್​​, ಜುಲೈನಲ್ಲಿ ಟೈಗರ್​​ ಕೊನೆಯುಸಿರೆಳೆದರು. ಮೂವರು ಮೃತಪಟ್ಟ ನಂತರದಲ್ಲಿ ಸೀಸರ್​ ಖಿನ್ನತೆಗೆ ಒಳಗಾಗಿದ್ದ. ಆತನಿಗೆ ಏಕಾಂಗಿತನ ತೀವ್ರವಾಗಿ ಕಾಡುತ್ತಿತ್ತು. ಇದೇ ಕಾರಣಕ್ಕೆ ಸೀಸರ್​ ಕೆಲವೇ ತಿಂಗಳಲ್ಲಿ ಮೃತಪಟ್ಟ. ಈ ನಾಲ್ಕು ಶ್ವಾನಗಳಿಗೆ ಸರ್ಕಾರಿ ಗೌರವ ನೀಡಿ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಮೂಲಕ ಹೀರೋಗಳಿಗೆ ಗೌರವ ಅರ್ಪಿಸಲಾಗಿದೆ. ನಾಲ್ಕೂ ನಾಯಿಗಳನ್ನು ಒಂದೇ ಕಡೆ ಹೂತಿದ್ದು ವಿಶೇಷ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ