ಗುರುದಾಸ್ಪುರ: ಸಿಖ್ ರ ಪವಿತ್ರ ಧಾರ್ಮಿಕ ಕ್ಷೇತ್ರ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು, ಪಾಕಿಸ್ತಾನ ಸೇನಾ ಮುಖ್ಯಸ್ಥರಿಗೆ ಒಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ಒಬ್ಬ ಸೇನಾ ಯೋಧನಾಗಿ, ಯಾವ ಸೇನೆ ಕದನ ವಿರಾಮ ಉಲ್ಲಂಘನೆ ಮಾಡುವಂತೆ ಹೇಳಿಕೊಡುತ್ತದೆ? ಇತರೆ ದೇಶದ ಯೋಧನನ್ನು ಹತ್ಯೆ ಮಾಡುವಂತೆ ಹೇಳುತ್ತದೆ? ಪಠಾಣ್ ಕೋಟ್ ಹಾಗೂ ಅಮೃತಸರದ ಮೇಲೆ ದಾಳಿ ಮಾಡುವಂತೆ ಯಾವ ಸೇನೆ ಜನರನ್ನು ಕಳುಹಿಸುತ್ತದೆ ಎಂದು ಕೇಳಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥರಿಗೆ ಒಂದು ಎಚ್ಚರಿಕೆಯನ್ನು ನೀಡುತ್ತಿದ್ದೇನೆ, ನಾವೂ ಕೂಡ ಪಂಜಾಬಿಗಳೇ. ಭಾರತ ಪ್ರವೇಶಿಸಲು, ಇಲ್ಲಿನ ವಾತಾವರಣ ಹಾಳು ಮಾಡಲು ನಾವು ನಿಮಗೆ ಬಿಡುವುದಿಲ್ಲ ಎಂದಿದ್ದಾರೆ.
ಬಳಿಕ ಮಾತನಾಡಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಪಂಜಾಬ್ ಮುಖ್ಯಮಂತ್ರಿಗಳು ಹೇಳಿದ್ದನ್ನೇ ನಾನು ಹೇಳಲು ಬಯಸುತ್ತೇನೆ. ಉಗ್ರರು ಭಾರತ ಪ್ರವೇಶಿಸಲು ಹಾಗೂ ಮುಗ್ಧರನ್ನು ಹತ್ಯೆ ಮಾಡಲು ನಾವು ಬಿಡುವುದಿಲ್ಲ. ಇದು ಯಾರಿಗೂ ಸಹಾಯ ಮಾಡುವುದಿಲ್ಲ. ಒಂದು ದೇಶದೊಂದಿಗೆ ವ್ಯವಹರಿಸುವ ದಾರಿ ಇದಲ್ಲ. ಇದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು. ಉಭಯ ರಾಷ್ಟ್ರಗಳ ಸಂಬಂಧ ಸುಧಾರಿಸಲು ಈ ಕಾರ್ಯಕ್ರಮದ ಮೂಲಕವೇ ಆರಂಭಿಸೋಣ ಎಂದು ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಗಡಿಯಲ್ಲಿರುವ ಗುರುದಾಸ್ಪುರ ಜಿಲ್ಲೆಯಲ್ಲಿ ಕಾರ್ತಾರ್ಪುರ ಕಾರಿಡಾರ್ ನಿರ್ಮಾಣ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ನ.22ರಂದು ನಿರ್ಧಾರ ತೆಗೆದುಕೊಂಡಿತ್ತು. ಪಂಜಾಬ್’ನ ಗುರುದಾಸ್ಪುರದಲ್ಲಿರುವ ಡೇರಾ ಬಾಬಾ ನಾನಕ್’ನಿಂದ ಅಂತಾರಾಷ್ಟ್ರೀಯ ಗಡಿವರೆಗೆ ನಾವು ಕಾರಿಡಾರ್ ಅಭಿವೃದ್ಧಿಪಡಿಸುತ್ತೇವೆ. ಗಡಿಯಾಚೆಯಿಂದ ಕರ್ತಾರ್ಪುರವರೆಗೆ ನೀವೂ ಕಾರಿಡಾರ್ ಅಭಿವೃದ್ಧಿ ಮಾಡಿ ಎಂದು ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು.
kartarpur corridor, Foundation stone, Vice-President Venkaiah Naidu,Punjab CM Amarinder Singh