ಬೆಂಗಳೂರಿನ ಘತವೈಭವವನ್ನು ಮರುಕಳಿಸಲು ಸರ್ಕಾರ ಸಿದ್ದ : ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು, ನ.24- ಬೆಂಗಳೂರಿನ ಘತವೈಭವವನ್ನು ಮರುಕಳಿಸಲು ನಮ್ಮ ಸರ್ಕಾರ ಸಿದ್ದವಿದ್ದು, ಮುಂದಿನ ಮೂರು ವರ್ಷಗಳಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ 21 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಘೋಷಿಸಿದರು.

ಬಿಬಿಎಂಪಿ ಪೂರ್ವ ವಲಯದ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಉದ್ದೇಶದಿಂದ ಪುರಭವನದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವೇ ಇಲ್ಲ ಎಂದು ಯಡಿಯೂರಪ್ಪ ಹೇಳಿಕೆ ಕೊಟ್ಟಿದ್ದಾರೆ. ಅವರಿಗೇನು ಗೊತ್ತು ?ನಿನ್ನೆ ತಾನೇ ಎರಡೂವರೆ ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆಗೆ ನಾನು ಅಪ್ರೂವಲ್ ಕೊಟ್ಟಿದ್ದೇನೆ. ಅದರ ಜತೆಗೆ ಇನ್ನೂ 9 ಸಾವಿರ ಕೋಟಿ ಯೋಜನೆಯನ್ನು ನಮ್ಮ ಸರ್ಕಾರ ಕೈಗೆತ್ತಿಕೊಂಡಿದೆ ಎಂದರು.

ಪ್ರತಿ ವರ್ಷ ಸಂಗ್ರಹವಾಗಿರುವ 4 ಸಾವಿರ ಕಂದಾಯ, ಮುಂದಿನ ಮೂರು ವರ್ಷದ್ದೂ ಸೇರಿ 12 ಸಾವಿರ ಕೋಟಿ ಆಗುತ್ತೆ. ಹಾಗಾಗಿ 21 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎಂದು ಹೇಳಿದರು.

ಈ ಹಿಂದೆ ನಗರಕ್ಕೆ ಇದ್ದ ಉದ್ಯಾನನಗರಿ ಎಂಬ ಹೆಸರು ಮರುಕಳಿಸುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಇದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಗಾರ್ಬೆಜ್ ಸಿಟಿ ಎಂಬ ಹೆಸರು ಹೋಗಲಾಡಿಸಬೇಕಿದೆ.ಈ ಎಲ್ಲ ಕಾರ್ಯಗಳನ್ನು ನಾವು ಪರಿಣಾಮಕಾರಿಯಾಗಿ ಮಾಡಬೇಕೆಂಬ ಉದ್ದೇಶದಿಂದ ನಾನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದೇನೆ. ಯಾವುದೇ ಲೋಪದೋಷ ವಾಗದಂತೆ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ನಗರ ಬೆಳೆದಂತೆ ಜನಸಂಖ್ಯೆಯೂ ಹೆಚ್ಚಾಗುತ್ತಿದೆ.ಆದರೆ, ರಸ್ತೆ ವಿಸ್ತಾರಗೊಂಡಿಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸ್ವಚ್ಛತೆಗಾಗಿ 1.37ಕೋಟಿ ಮೌಲ್ಯದ ಸ್ವಯಂ ಚಾಲಿತ ರಸ್ತೆ ಶುಚಿಗೊಳಿಸುವ 17ಯಂತ್ರಗಳನ್ನು ಖರೀದಿಸಲು ತೀರ್ಮಾನಿಸಿದ್ದೇವೆ. ಈಗ 9 ಯಂತ್ರಗಳಿವೆ. ಒಟ್ಟಾರೆ 50 ಯಂತ್ರ ಖರೀದಿಸುತ್ತೇವೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ