ಬೆಂಗಳೂರು, ನ.24- ನಗರದ ನಾಗರಿಕರೇ ಎಚ್ಚರ..! ಎಚ್ಚರ..! ಕಸ ಹಾಕುವ ಮುನ್ನ ಒಮ್ಮೆ ಯೋಚಿಸಿ…
ಎಲ್ಲೆಂದರಲ್ಲಿ ಕಸ ಹಾಕುವವರು ಮಿಸ್ ಮಾಡ್ದೆ ಈ ಸ್ಟೋರೀನ ಓದಿ…
ಕಸ ವಿಲೇವಾರಿ ಸಮಸ್ಯೆ ನಗರದಲ್ಲಿ ಮಿತಿಮೀರಿದ್ದು, ಹೈಕೋರ್ಟ್ ಬಿಬಿಎಂಪಿಗೆ ಚಾಟಿ ಬೀಸುತ್ತಲೇ ಇದೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಕಡಿವಾಣ ಹಾಕಲು ಬ್ರಹ್ಮಾಸ್ತ್ರ ಸಿದ್ಧಪಡಿಸಿದ್ದಾರೆ.
ನೀವೇನಾದರೂ ಯಾರೂ ನೋಡುತ್ತಿಲ್ಲ, ಎಲ್ಲಾದರೂ ಕಸ ಹಾಕಿ ಬಂದುಬಿಡೋಣ ಎಂದುಕೊಂಡು ಕವರ್‍ನಲ್ಲಿ ತ್ಯಾಜ್ಯ ತುಂಬಿಕೊಂಡು ನಡೆದುಕೊಂಡು ಹೋಗಿ ಎಲ್ಲಾದರೂ ಬಿಸಾಡಿದರೆ ಮುಲಾಜಿಲ್ಲದೆ 200ರೂ.ದಂಡ ಪೀಕಬೇಕಾಗುತ್ತದೆ.
ನಡೆದುಕೊಂಡು ಹೋದರೆ ಗೊತ್ತಾಗಿಬಿಡುತ್ತದೆ ಎಂದು ದ್ವಿಚಕ್ರ ವಾಹನದಲ್ಲಿ ಕಾಣದಂತೆ ಎಲ್ಲಾದರೂ ಕಸ ಹಾಕೋಣ ಅಂದುಕೊಂಡಿದ್ದರೆ ಮುಗಿಯಿತು… ನಿಮ್ಮ ಗಾಡಿ ಸೀಜ್ ಆಗುವುದು ಖಂಡಿತ.ಏಕೆಂದರೆ, ಅಲ್ಲಲ್ಲೇ ಸಿಸಿ ಕ್ಯಾಮೆರಾಗಳು ನಿಮ್ಮನ್ನೆಲ್ಲ ಕಾಯುತ್ತಿರುತ್ತವೆ. ಜತೆಗೆ ಪೌರ ಕಾರ್ಮಿಕರು, ಮಾರ್ಷಲ್‍ಗಳು ಪರಿಶೀಲಿಸುತ್ತಲೇ ಇರುತ್ತಾರೆ. ಹಾಗಾಗಿ ಎಲ್ಲೆಂದರಲ್ಲಿ ಕಸ ಹಾಕುವ ಮುನ್ನ ಎಚ್ಚರದಿಂದಿರಿ.
ಇನ್ನು ಕಾರು, ಆಟೋ ಅಥವಾ ಇನ್ನಾವುದಾದರೂ ನಾಲ್ಕು ಚಕ್ರದ ವಾಹನದಲ್ಲಿ ವಾಣಿಜ್ಯ ಕಸವನ್ನು ತಂದು ತೆಗೆದುಕೊಂಡು ಹೋಗುತ್ತಿದ್ದರೆ ಮುಗಿಯಿತು… ಪಕ್ಕಾ 5 ಸಾವಿರ ರೂ.ದಂಡ ಕಟ್ಟಲೇಬೇಕಾಗುತ್ತದೆ.
ನೀವು ಯಾವ ರೀತಿಯ ಕಸ ತೆಗೆದುಕೊಂಡು ಹೋಗುತ್ತೀರೋ ಅದರ ಮಾದರಿಯ ಮೇಲೆ ದಂಡದ ಪ್ರಮಾಣವನ್ನು ಫಿಕ್ಸ್ ಮಾಡಲಾಗುತ್ತದೆ.ದಂಡ ತಾನೇ ಕಟ್ಟಿದರಾಯಿತು ಎಂದು ಉದಾಸೀನ ಬೇಡ. ನಿಮ್ಮ ಗಾಡಿಗಳನ್ನೇ ಸೀಜ್ ಮಾಡಿ ನಾಲ್ಕು ದಿನಗಳ ಕಾಲ ಅಧಿಕಾರಿಗಳು ನಿಮಗೆ ಕೊಡುವುದಿಲ್ಲ. ಅಲ್ಲದೆ, ಕೇಸ್‍ಗಳನ್ನು ಕೂಡ ಎದುರಿಸಬೇಕಾಗುತ್ತದೆ.