ಬೆಂಗಳೂರು, ನ.23-ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಬೇಡಿಕೆಗಳ ಈಡೇರಿಕೆಗೆ 15 ದಿನ ಗಡುವು ನೀಡಿರುವ ರೈತ ಪರ ಹೋರಾಟಗಾರರು ಮುಷ್ಕರವನ್ನು ಹಿಂಪಡೆದಿದ್ದಾರೆ. ಇದರಿಂದ ಸರ್ಕಾರಕ್ಕೆ ಉಂಟಾಗಿದ್ದ ಬಿಕ್ಕಟ್ಟು ತಾತ್ಕಾಲಿಕವಾಗಿ ಬಗೆಹರಿದಂತಾಗಿದೆ.
ಕಬ್ಬು ಬಾಕಿ ಪಾವತಿ ದರ ನಿಗದಿ ಸಂಬಂಧಿಸಿದಂತೆ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಕಳೆದ ಒಂದು ವಾರದ ಹಿಂದೆ ರೈತರು ಪ್ರತಿಭಟನೆ ನಡೆಸಿದ್ದರು. ಕಬ್ಬು ತುಂಬಿದ ಲಾರಿಗಳನ್ನು ಗೇಟ್ ಒಡೆದು ನುಗ್ಗಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರಲ್ಲದೆ, ನಿನ್ನೆಯಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ್ ಕೃಷಿಕ್ ಸಮಾಜದ ಅಧ್ಯಕ್ಷ ಸಿದ್ದನಗೌಡ ಮೋದಗಿ ಅವರು ಅಮರಣಾಂತ ಉಪವಾಸ ಕುಳಿತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಆರಂಭಿಸಿದ್ದರು.
ಸರ್ಕಾರದ ಪ್ರತಿನಿಧಿಯಾಗಿ ತೆರಳಿದ ಡಿ.ಕೆ.ಶಿವಕುಮಾರ್ ಅವರು ಪ್ರತಿಭಟನಾ ನಿರತರೊಂದಿಗೆ ಮಾತನಾಡಿ, ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ. ನಾನು ಈ ಇಲಾಖೆಗೆ ಸಂಬಂಧಿಸಿದವನಲ್ಲ. ಆದರೂ ರೈತರ ಸಮಸ್ಯೆ ಅರ್ಥ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಮುಖಂಡರ ಬಳಿ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ. ಸರ್ಕಾರದಿಂದ ಬರಬಹುದಾದ ಪರಿಹಾರವನ್ನು ಕೊಡಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.
ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು. ನಾವೆಲ್ಲ ಹೋರಾಟ ಮಾಡಿದ್ದರಿಂದಲೇ ನಮಗೆ ಸ್ವಾತಂತ್ರ್ಯ ಬಂದಿದ್ದು. ಮುಖ್ಯಮಂತ್ರಿಗಳ ಪರವಾಗಿ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ . ಪ್ರತಿಭಟನೆ ಮಾಡುವುದು, ಕಾನೂನು ಕೈಗೆತ್ತಿಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.
ಪ್ರತಿಭಟನಾ ನಿರತ ರೈತರು ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಬರಬೇಕಾದ ಬಾಕಿಯ ಬಗ್ಗೆ ದಾಖಲೆಗಳನ್ನು ಸಚಿವರಿಗೆ ತೋರಿಸಿದರು.
ಮೂರರಿಂದ ನಾಲ್ಕು ಲಕ್ಷದಷ್ಟು ಬಾಕಿ ಬರಬೇಕಿದೆ. ಬಾಕಿಗಾಗಿ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ. ನಿಮ್ಮ ಭರವಸೆ ಮೇಲೆ ತಾತ್ಕಾಲಿಕವಾಗಿ ನಮ್ಮ ಪ್ರತಿಭಟನೆ ವಾಪಸ್ಪಡೆಯುತ್ತೇವೆ. ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ರೈತ ಮಹಿಳೆ ಜಯಶ್ರೀ ಮತ್ತಿತರರು ಹೇಳಿದರು.