ಕಸದ ಸಮಸ್ಯೆಗೆ ಮುಕ್ತಿ ಹಾಡಲು ಪ್ರತ್ಯೇಕ ನಿಗಮ

ಬೆಂಗಳೂರು, ನ.23- ಕಳೆದ ಹಲವು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿಗೊಳಗಾಗಿದ್ದ ಬೆಂಗಳೂರು ಮಹಾನಗರದ ಕಸದ ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದು, ಈ ಸಮಸ್ಯೆಗೆ ಮುಕ್ತಿ ಹಾಡಲು ಪ್ರತ್ಯೇಕ ನಿಗಮ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದೆ.

ಪ್ರತ್ಯೇಕ ನಿಗಮ ಸ್ಥಾಪಿಸುವ ಮೂಲಕ ಬೆಂಗಳೂರು ಮಹಾನಗರದಲ್ಲಿ ಇರುವ ಕಸದ ಸಮಸ್ಯೆಯನ್ನು ಬಗೆಹರಿಸಬಹುದೆಂಬ ಸಲಹೆಯನ್ನು ಬಿಬಿಎಂಪಿ ಸರ್ಕಾರದ ಮುಂದಿಟ್ಟಿದ್ದು, ನಿಗಮ ಸ್ಥಾಪನೆಗೆ ಸರ್ಕಾರ ಒಲವು ವ್ಯಕ್ತಪಡಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಮುಗಿಯದ ಗೋಳಾಗಿದೆ. ನಗರದಾದ್ಯಂತ ಕಸ ಸಂಗ್ರಹಿಸುವುದು ಒಂದು ಸಮಸ್ಯೆಯಾದರೆ, ಎಲ್ಲೆಂದರಲ್ಲಿ ಕಸ ಹಾಕುವುದು ಮತ್ತೊಂದು ಸಮಸ್ಯೆಯಾಗಿ ಕಾಡುತ್ತಿದೆ. ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡುವುದು ಇನ್ನೊಂದು ಸಮಸ್ಯೆಯಾಗಿ ಪರಿಣಮಿಸಿದೆ.

ಹೊಸದಾಗಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಮುಂದಾದರೆ ಪ್ರತಿಭಟನೆಗಳು ಎದುರಾಗುತ್ತವೆ. ನಗರದ ಕಸ ಸಂಗ್ರಹ ವಿಲೇವಾರಿ ಮಾಡಲು ಟೆಂಡರ್ ಕರೆದರೆ ಅದೊಂದು ರೀತಿಯ ಗೋಳು. ವಿಪರೀತ ನಿರ್ಬಂಧಗಳಿಂದ ಟೆಂಡರ್ ಪಡೆಯಲು ಗುತ್ತಿಗೆದಾರರೇ ಮುಂದೆ ಬರುತ್ತಿಲ್ಲ. ಕಸ ಸಾಗಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸುವುದು, ಪೌರಕಾರ್ಮಿಕರಿಗೆ ಕಡ್ಡಾಯ ಬಯೋಮೆಟ್ರಿಕ್ ವ್ಯವಸ್ಥೆ, ಹಳೇ ವಾಹನಗಳನ್ನು ತೆರವುಗೊಳಿಸಿ ಕಸ ಸಾಗಿಸಲು ಹೊಸ ವಾಹನಗಳನ್ನು ತರಬೇಕು. ವಾಹನದ ದಾಖಲಾತಿಗಳ ತೀವ್ರ ಪರಿಶೀಲನೆ ಸೇರಿದಂತೆ ಹತ್ತು-ಹಲವು ನಿರ್ಬಂಧಗಳನ್ನು ವಿಧಿಸುತ್ತಿರುವುದರಿಂದ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಗುತ್ತಿಗೆದಾರರ ಸಂಘದವರು ಇತ್ತೀಚೆಗೆ ಸಭೆ ನಡೆಸಿ ಟೆಂಡರ್ ಷರತ್ತುಗಳನ್ನು ಸಡಿಲಿಸುವಂತೆ ಆಗ್ರಹಿಸಿದ್ದಾರೆ. ಷರತ್ತುಗಳನ್ನು ಸಡಿಲಿಸಿದರೆ ಸರ್ಕಾರಕ್ಕೆ ಹೊಸ ತಲೆನೋವು ಎದುರಾಗಲಿದೆ.

ಈ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಲು ಕಸದ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಮಹಾನಗರದ ಕಸದ ಸಮಸ್ಯೆ ಮುಕ್ತಿಗಾಗಿ ಪ್ರತ್ಯೇಕ ನಿಗಮ ರಚಿಸುವುದು ಸೂಕ್ತ ಎಂಬ ಶಿಫಾರಸ್ಸನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಬಿಬಿಎಂಪಿಯಲ್ಲಿ ಸಾಕಷ್ಟು ಪೌರಕಾರ್ಮಿಕರಿದ್ದಾರೆ. ಕಸ ಸಾಗಿಸುವ ಅರ್ಧದಷ್ಟು ವಾಹನಗಳು ಬಿಬಿಎಂಪಿ ಒಡೆತನದಲ್ಲಿವೆ. ಕಸದ ಸಂಗ್ರಹ ವಿಲೇವಾರಿಯನ್ನು ಬಿಬಿಎಂಪಿಗೆ ವಹಿಸಿದರೆ ಹೊಸ ವಿವಾದ ಉಂಟಾಗುತ್ತದೆ.

ಅದಕ್ಕಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವುದು ಸೂಕ್ತ ಎಂದು ಮಾಹಿತಿ ಸಮೇತ ಮುಂದಿಟ್ಟಿರುವ ಸಲಹೆಯ ಸಾಧಕ-ಬಾಧಕಗಳನ್ನು ಪರಿಶೀಲಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸೂಚನೆ ನೀಡಿದ್ದಾರೆ.
ಪ್ರಸ್ತುತ ಇರುವ ಪರಿಸ್ಥಿತಿ ಗಮನಿಸಿದರೆ ಕಸಕ್ಕೆ ಪ್ರತ್ಯೇಕ ನಿಗಮದ ಅಗತ್ಯತೆ ಮತ್ತು ಅನಿವಾರ್ಯತೆ ಎರಡೂ ಇದೆ. ಬಹುತೇಕ ಪ್ರತ್ಯೇಕ ನಿಗಮ ಸ್ಥಾಪನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಸ್ಥಾಪನೆಯಾಗಲಿರುವ ಈ ನಿಗಮ ಆರಂಭ ಶೂರತ್ವ ಪಡೆಯದೆ ವ್ಯವಸ್ಥಿತವಾಗಿ ನಡೆದರೆ ಅರ್ಥಪೂರ್ಣವಾಗುತ್ತದೆ. ಇಲ್ಲವಾದರೆ ಸರ್ಕಾರದ ಸ್ವಾಮ್ಯದಲ್ಲಿರುವ ಹಲವಾರು ರೋಗಗ್ರಸ್ಥ ನಿಗಮಗಳ ಪಟ್ಟಿಗೆ ಇದೂ ಸೇರಬೇಕಾಗುತ್ತದೆ.

ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನಿಗಮ ರಚಿಸಿ ನಗರದ ಕಸದ ಸಮಸ್ಯೆಯನ್ನು ಪರಿಹರಿಸಲು ಮುಂದಾದರೆ ನಾಗರಿಕರ ಪ್ರಶಂಸೆಗೆ ಸರ್ಕಾರ ಪಾತ್ರವಾಗಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ