ಬೆಂಗಳೂರು, ನ.23- ನಗರದಲ್ಲಿ ಕಟ್ಟಡ ಕುಸಿದು ಹಲವಾರು ಅಮಾಯಕರ ಜೀವಗಳು ಬಲಿಯಾಗುತ್ತಿದ್ದರೂ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವುದಕ್ಕೆ ಇನ್ನೂ ಬಿದ್ದಿಲ್ಲ ಕಡಿವಾಣ.
ಕಳೆದ ಹಲವು ವರ್ಷಗಳಲ್ಲಿ ಹತ್ತಾರು ಕಟ್ಟಡಗಳು ಉರುಳಿ ಬಿದ್ದಿವೆ. ನೂರಕ್ಕೂ ಹೆಚ್ಚು ಅಮಾಯಕರು ಬಲಿಯಾಗಿದ್ದಾರೆ. ಇಂತಹ ಅವಘಡಗಳಿಗೆ ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸುತ್ತಿರುವುದೇ ಪ್ರಮುಖ ಕಾರಣ.
ಇಂತಹ ಅವೈಜ್ಞಾನಿಕ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಹಾಕಬೇಕಾದ ಬಿಬಿಎಂಪಿ ಅಧಿಕಾರಿಗಳು ತಮ್ಮ ಕಣ್ಣೆದುರೇ ಅಕ್ರಮ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದರಿಂದ ನಗರದಲ್ಲಿ ನೂರಾರು ಅಕ್ರಮ ಕಟ್ಟಡಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ.
ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವುದಕ್ಕೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಜಯನಗರ 7ನೆ ಹಂತದಲ್ಲಿರುವ ನ್ಯಾಷನಲ್ ಕಾಲೇಜು ಎದುರಿಗೆ 2್ಡ038 ಅಳತೆಯ ಸಣ್ಣ ನಿವೇಶನದಲ್ಲಿ ವ್ಯಕ್ತಿಯೊಬ್ಬರು ರಾಜಾರೋಷವಾಗಿ ನಕ್ಷೆ ಮಂಜೂರಾತಿ ಇಲ್ಲದೆ ಆರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ.
ಕೇವಲ ಸಣ್ಣ ನಿವೇಶನದಲ್ಲಿ ಆರು ಅಂತಸ್ತಿನ ಕಟ್ಟಡ ನಿರ್ಮಿಸಲು ಅನುಮತಿ ನೀಡಿರುವವರು ಯಾರು ಎಂಬ ಕುತೂಹಲಕ್ಕೆ ಸಾಮಾಜಿಕ ಕಾರ್ಯಕರ್ತ ಶಶಿಕುಮಾರ್ ಎಂಬುವವರು ಕಟ್ಟಡ ನಿರ್ಮಾಣಕ್ಕೆ ನೀಡಿರುವ ನಕ್ಷೆ ಮಂಜೂರಾತಿಯ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಆರ್‍ಟಿಐ ಅರ್ಜಿ ಸಲ್ಲಿಸಿದ್ದರು.
ಅರ್ಜಿಗೆ ಉತ್ತರ ನೀಡಿರುವ ಬನಶಂಕರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಜಯನಗರ 7ನೆ ಹಂತದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡಕ್ಕೆ ಪಾಲಿಕೆಯಿಂದ ಯಾವುದೇ ನಕ್ಷೆ ಮಂಜೂರಾತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಅಕ್ರಮ ಕಟ್ಟಡ ನಿರ್ಮಾಣ ಕುರಿತಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ಉಪ ಆಯುಕ್ತರಿಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಿಬಿಎಂಪಿಯ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ರಾಜಾರೋಷವಾಗಿ ಕಟ್ಟಡ ನಿರ್ಮಿಸುತ್ತಿರುವುದನ್ನು ನೋಡಿದರೆ ಈ ಅಕ್ರಮದಲ್ಲಿ ಪಾಲಿಕೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಇತ್ತೀಚೆಗಷ್ಟೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ನಕ್ಷೆ ಮಂಜೂರಾತಿ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಹಾಗೂ ಅದಕ್ಕೆ ಸಹಕರಿಸುವ ಪಾಲಿಕೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅನುವಾಗುವಂತೆ ಶೀಘ್ರದಲ್ಲೇ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಘೋಷಿಸಿದ್ದರು.
ಸ್ವತಃ ಉಪಮುಖ್ಯಮಂತ್ರಿಗಳೇ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿಕೆ ನೀಡಿದ್ದರೂ ನಗರದಲ್ಲಿ ತಲೆ ಎತ್ತುತ್ತಿರುವ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಸಾಧ್ಯವಾಗದಿರುವುದು ಹಾಸ್ಯಾಸ್ಪದವಾಗಿದೆ.
ಇನ್ನು ಮುಂದಾದರೂ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವುದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.