ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಆಗ್ರಹ : ಜಗದೀಶ್ ಶೆಟ್ಟರ್

ಬೆಂಗಳೂರು, ನ.23-ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಹಣಕಾಸು ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ಶಾಸಕರಾದ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ ರಾಜ್ಯಸರ್ಕಾರ ಈವರೆಗೂ ರೈತರಿಗೆ ಋಣಮುಕ್ತ ಪತ್ರ ನೀಡಿಲ್ಲ. ಬ್ಯಾಂಕ್‍ಗಳು ಸಾಲ ಪಡೆದ ರೈತರ ಬಂಧನಕ್ಕೆ ವಾರೆಂಟ್ ಜಾರಿ ಮಾಡುತ್ತಿವೆ. ರಾಜ್ಯ ಸರ್ಕಾರದ ಬಳಿ ಸಾಲ ಮನ್ನಾ ಮಾಡಲು 46 ಸಾವಿರ ಕೋಟಿ ಹಣವಿಲ್ಲ. ಹೀಗಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆರೋಪಿಸಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಪ್ರತಿವರ್ಷ 2 ಕೋಟಿ ರೂ. ಬಿಡುಗಡೆ ಮಾಡುತ್ತಿತ್ತು. ಈವರೆಗೂ ಕೇವಲ 50 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಇನ್ನೂ ಒಂದೂವರೆ ಕೋಟಿ ಬಾಕಿ ಉಳಿದಿದೆ ಎಂದು ಹೇಳಿದರು.

ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಐದಾರು ತಿಂಗಳಿನಿಂದಲೂ ಪಿಂಚಣಿ, ಮಾಸಾಶನಗಳನ್ನು ಬಿಡುಗಡೆ ಮಾಡಿಲ್ಲ. ಆಡಳಿತ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಅನುಕೂಲಕ್ಕಾಗಿ ಸರ್ಕಾರ ಮಾಡಿಕೊಂಡಿವೆ. ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಯವರು ಮಾಧ್ಯಮಗಳ ಜೊತೆ ಇನ್ನು ಮುಂದೆ ಮಾತನಾಡುವುದಿಲ್ಲ ಎಂದಿದ್ದಾರೆ. ಇದು ಒಳ್ಳೆಯ ನಡವಳಿಕೆಯಲ್ಲ. ಪ್ರತಿಪಕ್ಷಗಳು ಮತ್ತು ಮಾಧ್ಯಮಗಳು ಸರ್ಕಾರವನ್ನು ಹೊಗಳುವ ಸಲುವಾಗಿ ಇರುವುದಲ್ಲ. ತಪ್ಪು ಮಾಡಿದಾಗ ಅದನ್ನು ಪ್ರಶ್ನೆ ಮಾಡುತ್ತವೆ. ಮುಖ್ಯಮಂತ್ರಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಮತ್ತೊಬ್ಬ ಶಾಸಕ ಪಿ.ಸಿ.ರವಿ ಮಾತನಾಡಿ, ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್ -ಜೆಡಿಎಸ್ ಪಕ್ಷಗಳು ಚುನಾವಣೆ ವೇಳೆ ನೀಡಿದ್ದ ಭರವಸೆಗಳೆಷ್ಟು, ಸರ್ಕಾರ ರಚನೆಯಾದ ಮೇಲೆ ಅದರಲ್ಲಿ ಈಡೇರಿಸಿರುವುದೆಷ್ಟು ಎಂದು ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.

ಈ ಮೈತ್ರಿ ಸರ್ಕಾರವೇ ಅಪನಂಬಿಕೆಯ ಮೇಲೆ ನಡೆಯುತ್ತಿದೆ. ಹಾಗಾಗಿ ಟೆಲಿಫೆÇೀನ್ ಕದ್ದಾಲಿಕೆಯಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಸರ್ಕಾರಕ್ಕೆ ಯಾವುದೇ ದೂರದೃಷ್ಟಿ ಇಲ್ಲ. ಹಾಸನ ಜಿಲ್ಲೆಗೆ 58 ಕೋಟಿ ರೂ. ಖರ್ಚು ಮಾಡಿ ಹೊಸ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಲಾಗಿದೆ. ಆದರೆ ಆ ಕಾಲೇಜಿನ ಪಕ್ಕದಲ್ಲೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿದೆ. ಜೊತೆಗೆ 5 ಖಾಸಗಿ ಶಾಲೆಗಳೂ ಕೂಡ ಇವೆ. ಆ ಕಾಲೇಜಿಗೆ ವಿದ್ಯಾರ್ಥಿಗಳ ಕೊರತೆ ಇದೆ. ಹೀಗಿರುವಾಗ ಮತ್ತೊಂದು ಕಾಲೇಜು ಮಂಜೂರು ಮಾಡುವ ಅಗತ್ಯವೇನು? ವೈಯಕ್ತಿಕ ಪ್ರತಿಷ್ಠೆಗಾಗಿ ಸರ್ಕಾರದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ