ಮುಂಬೈ: ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ನೆ ಹೊರಡಿಸಲು ಮೀನಾಮೇಷ ಎಣಿಸುತ್ತಿರುವ ಕೇಂದ್ರ ಸರ್ಕಾರದ ನಡೆ ವಿರುದ್ಧ ಗರಂ ಆಗಿರುವ ಶಿವಸೇನೆ, 17 ನಿಮಿಷಗಳಲ್ಲಿ ನಾವು ಬಾಬ್ರಿ ಮಸೀದಿಯನ್ನೇ ಒಡೆದು ಹಾಕಿರುವಾಗ ರಾಮ ಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ನೆ ಹೊರಡಿಸಲು ಇನ್ನೂ ಎಷ್ಟು ಕಾಲಬೇಕು ಎಂದು ಪ್ರಶ್ನಿಸಿದೆ.
ಈ ಕುರಿತು ಮಾತನಾಡಿರುವ ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್, 17 ನಿಮಿಷಗಳಲ್ಲಿ ನಾವು ಬಾಬ್ರಿ ಮಸೀದಿಯನ್ನು ಕೆಡವಿದ್ದೆವು. ರಾಮ ಮಂದಿರಕ್ಕಾಗಿ ಸುಗ್ರೀವಾಜ್ನೆ ಹೊರಡಿಸಲು ಇನ್ನೆಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಗುಡುಗಿದ್ದಾರೆ.
ಉತ್ತರಪ್ರದೇಶದಲ್ಲಿ, ರಾಜ್ಯದಲ್ಲಿ, ಕೇಂದ್ರದಲ್ಲಿ ಹಾಗೂ ರಾಷ್ಟ್ರಪತಿ ಭವನದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತಾರೂಢ ಸರ್ಕಾರ ಶೀಘ್ರಗತಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಮ ಮಂದಿರ ನಿರ್ಮಾಣದ ಪರವಾಗಿ ರಾಜ್ಯಸಭೆಯಲ್ಲಿ ಹಲವಾರು ಸದಸ್ಯರಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ವಿರೋಧ ವ್ಯಕ್ತಪಡಿಸುತ್ತಿರುವವರು ಇನ್ನು ಮುಂದೆ ದೇಶದಲ್ಲಿ ಓಡಾಡಬೇಕಾದರೆ, ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
We demolished Babri in 17 min, how long does it take to bring law on Ram temple: Shiv Sena