ಬೆಂಗಳೂರು, ನ.23- ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ನಾನೇಕೆ ಭಾಗಿಯಾಗಬಾರದು. ಎಲ್ಲೇ ಸಮಸ್ಯೆ ಬಂದರೂ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಪ್ರಸ್ತುತ ಬಳ್ಳಾರಿಯಲ್ಲಿ ರೈತರ ಸಭೆ ನಡೆಸಿ ಸಮಸ್ಯೆ ಬಗೆಹರಿಸಿದ್ದೇನೆ. ಯಾರಿಗೂ ಗುತ್ತಿಗೆ ಕೊಟ್ಟಿಲ್ಲ ಎಂದು ಜಾರಕಿಹೊಳಿ ಸಹೋದರರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಮುನಿಸು ಅದೇಕೋ ಕಡಿಮೆಯಾದಂತೆ ಕಂಡುಬರುತ್ತಿಲ್ಲ.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ಸಭೆಗೆ ನಾನು ಭಾಗಿಯಾಗಿರುವ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ. ನಾವು ಸರ್ಕಾರಕ್ಕೆ ಸಮಸ್ಯೆಗಳು ಎದುರಾದಾಗ ಬಗೆಹರಿಸಬೇಕಾದುದು ನಮ್ಮ ಜವಾಬ್ದಾರಿ ಎಂದರು.
ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರು ತಟಸ್ಥವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಗರಸಭೆ, ಪುರಸಭೆಗಳ ಭೇಟಿಗಳಲ್ಲಿ ಅವರು ಬ್ಯುಸಿ ಇರಬೇಕು. ದೊಡ್ಡವರ ವಿಷಯವನ್ನು ಹೆಚ್ಚು ಪ್ರಸ್ತಾಪ ಮಾಡುವುದಿಲ್ಲ. ರಮೇಶ್ ಜಾರಕಿಹೊಳಿ ಅವರ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಿಲ್ ಬಾಕಿಗೆ ಸಂಬಂಧಿಸಿದಂತೆ ಅವರು ಪ್ರಾಮಾಣಿಕರಿದ್ದಾರೆ. ಬಾಕಿ ಹಣ ಕೊಡುತ್ತಾರೆ ಎಂದು ಹೇಳಿದರು.
ಇದೇ ವೇಳೆ ತೆಲಂಗಾಣ ವಿಧಾನಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಚುನಾವಣೆಯ ಕೆಲವು ಜವಾಬ್ದಾರಿಗಳನ್ನು ನಮಗೆ ನೀಡಿದೆ. ಅಲ್ಲಿನ ಕೆಲವು ಬಂಡಾಯ ಅಭ್ಯರ್ಥಿಗಳನ್ನು ವಾಪಸ್ ತೆಗೆಸಿದ್ದೇವೆ. ಟಿಆರ್ಎಸ್ ಪಕ್ಷ ನುಡಿದಂತೆ ನಡೆದಿದೆ. ಹಾಗಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಉತ್ತಮವಾದ ವಾತಾವರಣವಿದೆ. ಪಕ್ಷದ ಕೆಲಸಕ್ಕಾಗಿ ತೆಲಂಗಾಣಕ್ಕಾಗಿ ಹೋಗಿದ್ದೆವು ಎಂದು ಹೇಳಿದರು.
ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಸರ್ಕಾರ ರೈತರ ಪರವಿದ್ದು ರೈತರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.