ಬೆಂಗಳೂರು, ನ.23-ಬೆಂಗಳೂರಿನ ಸಂಚಾರ ದಟ್ಟಣೆಯ ಕೆಟ್ಟ ಅನುಭವಗಳು ನನಗೂ ಆಗಿವೆ. ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಪರಿಹಾರೋಪಾಯ ಕ್ರಮಗಳು ಚರ್ಚೆಯ ಹಂತದಲ್ಲಿವೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಇಂದು ಬೆಳಗ್ಗೆ ದಿಢೀರೆಂದು ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡ ಪರಮೇಶ್ವರ್ ಅವರು, ಕೆಲವು ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾವೇನೂ ಆಕಾಶದಿಂದ ಇಳಿದುಬಂದಿಲ್ಲ. ನಮಗೂ ಸಂಚಾರ ದಟ್ಟಣೆಯ ಅನುಭವ ಆಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಡಾಲರ್ಸ್ ಕಾಲೋನಿಯ ದೇವಸಂದ್ರದ ಇಂದಿರಾಕ್ಯಾಂಟೀನ್, ಅಲ್ಲಿನ ಅಡುಗೆ ಮನೆ, ಸಮೀಪದಲ್ಲಿ ಲೊಟ್ಟೆಗೊಲ್ಲಹಳ್ಳಿಯ ಸಾರ್ವಜನಿಕ ಗ್ರಂಥಾಲಯ, ಅಲ್ಲಿಂದ ಹೆಬ್ಬಾಳ ರಿಂಗ್ರಸ್ತೆ ನಾಗವಾರ ಸಮೀಪ ವೈಟ್ ಟಾಪಿಂಗ್ ಕಾಮಗಾರಿ, ಗಂಗಾನಗರ ಬಿಬಿಎಂಪಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿಇಎಲ್ ಸರ್ಕಲ್ನಲ್ಲಿರುವ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಆಹಾರ ಗುಣಮಟ್ಟವನ್ನು ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿರಾ ಕ್ಯಾಂಟೀನ್ಗೆ ಬಂದಿದ್ದ ಸಾರ್ವಜನಿಕರ ಬಳಿ ಮಾತನಾಡಿದ ಪರಮೇಶ್ವರ್, ಕ್ಯಾಂಟೀನ್ನಲ್ಲಿ ನೀಡುವ ಊಟದ ಬಗ್ಗೆ ವಿಚಾರಿಸಿದರು. ಪ್ರತಿಯೊಬ್ಬರೂ ತಿಂಡಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು.
ದೇವಸಂದ್ರ ಬಳಿ ಇರುವ ರಾಧಾಕೃಷ್ಣ ದೇವಸ್ಥಾನದ ಇಂದಿರಾ ಕ್ಯಾಂಟೀನ್ನ ಅಡುಗೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾರ್ವಜನಿಕ ಗ್ರಂಥಾಲಯಕ್ಕೆ ನಿತ್ಯ ಎಷ್ಟು ಮಂದಿ ಬರುತ್ತಾರೆ ಎಂದು ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು.
ಬಳಿಕ ಹೆಬ್ಬಾಳ ರಿಂಗ್ ರಸ್ತೆಯಲ್ಲಿ ನಡೆಯುತ್ತಿದ್ದ ವೈಟ್ ಟಾಪಿಂಗ್ ಕಾಮಗಾರಿ ವೀಕ್ಷಿಸಿದರು. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗಂಗಾನಗರ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ ಅವರು ಅಲ್ಲಿವ ಸೌಲಭ್ಯಗಳನ್ನು ಪರಿಶೀಲಿಸಿದರು. ಹೆರಿಗೆ ವಾರ್ಡ್ಗೆ ಚಪ್ಪಲಿ ಧರಿಸಿಯೇ ಸಚಿವರು ಹೋದರು. ಅವರನ್ನು ಹಿಂಬಾಲಿಸಿದ ಅಧಿಕಾರಿಗಳು, ಸಿಬ್ಬಂದಿ ಕೂಡ ಚಪ್ಪಲಿ ಧರಿಸಿ ಹೋದರು. ಬಳಿಕ ಆಸ್ಪತ್ರೆಯ ಸಿಬ್ಬಂದಿ ವಾರ್ಡ್ ಸ್ವಚ್ಛಗೊಳಿಸುತ್ತಿದ್ದುದು ಕಂಡುಬಂತು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಆಡಳಿತ ಪಕ್ಷದ ನಾಯಕ ಶಿವರಾಜ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಾಥ್ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಬಿಬಿಎಂಪಿ ಕ್ಯಾಂಟೀನ್ನ ಆಹಾರದ ಗುಣಮಟ್ಟದ ಬಗ್ಗೆ ಬಂದಿದ್ದ ದೂರುಗಳ ಹಿನ್ನೆಲೆಯಲ್ಲಿ ಗುಣಮಟ್ಟ ಹೆಚ್ಚಿಸುವಂತೆ ಸೂಚಿಸಲಾಗಿತ್ತು. ಇದರ ಅನುಷ್ಠಾನದ ಬಗ್ಗೆ ಪರಿಶೀಲಿಸಲು ಇಂದು ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗಿದೆ. ಗುಣಮಟ್ಟ ಈಗ ಚೆನ್ನಾಗಿದ್ದು, ನಾವು ಅಲ್ಲೇ ಉಪಹಾರ ಸೇವಿಸಿದ್ದೇವೆ. ರುಚಿ ಹಾಗೂ ಶುಚಿ ಎರಡೂ ಉತ್ತಮವಾಗಿದೆ ಎಂದು ತಿಳಿಸಿದರು.
ಗಂಗಾನಗರ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಇತ್ತೀಚೆಗೆ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿದ್ದು, ಖಾಸಗಿ ಆಸ್ಪತ್ರೆಯಷ್ಟೇ ಗುಣಮಟ್ಟದ್ದಾಗಿದೆ. ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೊದಲೇ ಮಾಹಿತಿ ನೀಡಿ ಪರಿಶೀಲನೆಗೆ ತೆರಳಿದರೆ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಳ್ಳುತ್ತಾರೆ. ಹೀಗಾಗಿ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದಿಢೀರ್ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.