ಶಿಕ್ಷಣ ಸಚಿವರ ನೇಮಕ ಮಾಡಿ ಸರ್ಕಾರಿ ಶಾಲೆ ಉಳಿಸಿ

ಬೆಂಗಳೂರು,ನ.23-ಒಂದು ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಿ ಶಿಕ್ಷಣ ಸಚಿವರನ್ನು ನೇಮಕ ಮಾಡಬೇಕೆಂದು ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಆಂದೋಲನದ ರೂವಾರಿ ಅನಿಲ್ ಶೆಟ್ಟಿ ಮಾತನಾಡಿ, ಶಿಕ್ಷಣ ಇಲಾಖೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಸಚಿವರೂ ಇಲ್ಲ. ಶಾಲೆಗಳ ಅಭಿವೃದ್ದಿಗೆ ಹಣವೂ ಇಲ್ಲ. ಆದ್ದರಿಂದ ಒಂದು ವಾರದೊಳಗೆ ಶಿಕ್ಷಣ ಸಚಿವರನ್ನು ನೇಮಿಸಬೇಕು, ಉನ್ನತ ಶಿಕ್ಷಣ ಸಚಿವಾಲಯದಲ್ಲಿ ಮುಖ್ಯ ಕಾರ್ಯದರ್ಶಿಗಳನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಸರ್ಕಾರ ಇನ್ನೊಂದು ವಾರದೊಳಗೆ ಶಿಕ್ಷಣ ಸಚಿವರನ್ನು ನೇಮಕ ಮಾಡದಿದ್ದರೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಬೆಳಗಾವಿ ಚಲೋ ಆಂದೋಲನ ಮಾಡುವ ಮೂಲಕ ಸರ್ಕಾರದ ಶಿಕ್ಷಣ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯದ ಶಿಕ್ಷಣ ನೀತಿಯಲ್ಲಿ ಅನೇಕ ತಿದ್ದುಪಡಿಯ ಅಗತ್ಯವಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು.
ಚಲನಚಿತ್ರ ನಟ ಅಲೋಕ್‍ಬಾಬು ಮತ್ತು ಅವರ ತಂಡದವರು ಕೊಡಗಿನಲ್ಲಿ ಒಂದು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲು ಧನ ಸಹಾಯ ಮಾಡಿದ್ದಾರೆ. ಅವರನ್ನು ಸರ್ಕಾರಿ ಶಾಲೆಗಳ ಬಗ್ಗೆ ಅರಿವು ಮೂಡಿಸಲು ಶಿಕ್ಷಣದ ರಾಯಭಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಪತ್ರಿಕಾಗೋಷ್ಠಿಯಲ್ಲಿ ಇವರಿಗೆ ಫಲಕ ನೀಡಿ ಗೌರವಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ