ಬೆಂಗಳೂರು: ಯಾರೋ ತಂದು ತೊಟ್ಟಿಯಲ್ಲಿ ಹಾಕಿದ ಮಗು, ಅಪಘಾತದಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡ ಕೂಸು, ಭಿಕ್ಷೆ ಬೇಡುತ್ತಿದ್ದ ಕಂದಮ್ಮ… ಹೀಗೆ ಪೊರೆಯುವವರಿಲ್ಲದೆ ಬೀದಿಪಾಲಾಗಿದ್ದ ಏಳು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಇದುವರೆಗೆ ಆಶ್ರಯ ನೀಡಿದ ಹೆಗ್ಗಳಿಕೆಗೆ ಪಾತ್ರವಾದ ಅನಾಥ ಶಿಶುನಿವಾಸಕ್ಕೆ ಈಗ 75ರ ಸಂಭ್ರಮ.
ಏಳೂವರೆ ದಶಕಗಳ ಹಿಂದೆ, ಅಂದರೆ 1942ರಲ್ಲಿ ‘ಅನಾಥ ಶಿಶು ಸಂರಕ್ಷಣಾಲಯ’ ಹೆಸರಿನಲ್ಲಿ ಶಂಕರಪುರ ಬಡಾವಣೆಯಲ್ಲಿರುವ ರಂಗರಾವ್ ರಸ್ತೆಯ ಬಾಡಿಗೆ ಮನೆಯಲ್ಲಿ ಈ ಅನಾಥಾಲಯ ಆರಂಭವಾಯಿತು. 1945ರಲ್ಲಿ ಇದಕ್ಕೆ ಸರ್ಕಾರದ ಅಧಿಕೃತ ಮಾನ್ಯತೆ ಸಿಕ್ಕಿತು. 1957ರ ಹೊತ್ತಿಗೆ ಬಿಎಂಎಸ್ ಕಾಲೇಜು ಎದುರಿನ ಜಾಗದಲ್ಲಿ ಚಿಕ್ಕದಾಗಿ ಸ್ವಂತ ಗೂಡನ್ನು ಪಡೆದುಕೊಂಡಿತು. ಐದು ವರ್ಷಗಳ ಬಳಿಕ ಇಲ್ಲಿಯೇ ವಸತಿ ಕಟ್ಟಡ ನಿರ್ಮಿಸಲಾಯಿತು.
‘ಶಾಲೆ, ಕಾಲೇಜು, ವಸತಿ ನಿಲಯಗಳಲ್ಲಿ ಮಕ್ಕಳು ಹೆಚ್ಚಲಿ ಎಂದು ನಾವು ಭಯಸುತ್ತೇವೆ. ಆದರೆ ಈ ಅನಾಥಾಶ್ರಮಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲಿ ಎಂದು ಕೇಳಿಕೊಳ್ಳುತ್ತೇವೆ. ಎಲ್ಲರೂ ಅವರದ್ದೇ ಆದ ಬೆಚ್ಚನೆ ಗೂಡಿನಲ್ಲಿ ಇದ್ದರೇ ಚೆಂದ’ ಎನ್ನುವುದು ಸಂಸ್ಥೆಯ ಉಪಾಧ್ಯಕ್ಷೆ ಕೆ.ಪಿ ಗೀತಾ ಅವರ ಮಾತು.
ಮಿಸ್ರಿಲಾಲ್ ಮಹಿಮೆ: ಮಿಸ್ರಿಲಾಲ್ ಪಾರಸ್‌ಮಲ್ ಅವರು ಈ ಅನಾಥ ಶಾಲೆಯ ನಿರ್ಮಾತೃ. 1942ರಿಂದ 1974ರವರೆಗೆ ಅವರು ಇಲ್ಲಿ ಅಧ್ಯಕ್ಷರಾಗಿದ್ದರು. ‘ಸೇವೆಯೇ ನನ್ನ ಆದ್ಯ ಕರ್ತವ್ಯ’ ಎನ್ನುತ್ತಿದ್ದ ಅವರು ಸಾಕಷ್ಟು ದಾನಿಗಳ ಸಹಾಯ ಪಡೆದು ಅನಾಥ ಮಕ್ಕಳ ಆಶ್ರಯದಾತರಾದರು.
‘ಮನೆಗೊಂದು ಮಗು, ಮಗುವಿಗೊಂದು ಮನೆ’ ಎನ್ನುವುದು ಅವರ ಕನಸು. ಅದರಂತೆಯೇ ಮಕ್ಕಳನ್ನು ದಾನ ಮಾಡುವ ಕಾರ್ಯವನ್ನು ಅವರು ಕೈಗೆತ್ತಿಕೊಂಡರು. ವಜ್ರದ ವ್ಯಾಪಾರಿಯಾಗಿದ್ದ ಗಂಜಾಂ ಎಸ್. ಭೀಮಾಜಿವರ ಅವರು ಈ ಆಶ್ರಮದ ಚೌಕಟ್ಟನ್ನು ಭಿನ್ನವಾಗಿ ರೂಪಿಸಿದರು.
ಈಗ ಮಕ್ಕಳನ್ನು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಕಾರಾ) ಸಂಸ್ಥೆಯ ಮೂಲಕವೇ ಅಧಿಕೃತವಾಗಿ ದತ್ತು ನೀಡಲಾಗುತ್ತಿದೆ.
ಮಕ್ಕಳ ಆಟ–ಪಾಠ, ಕಲಿಕೆ
ಆಶ್ರಮದೊಳಕ್ಕೆ ಕಾಲಿಟ್ಟ ಕೂಡಲೇ ಅಲ್ಲಿಯ ಸ್ವಚ್ಛ, ಶುಭ್ರ ವಾತಾವರಣ ಕಣ್ಣಿಗೆ ಕಟ್ಟುತ್ತದೆ. ಅಷ್ಟೇ ಅಲ್ಲ ಇಲ್ಲಿಯ ಭಟ್ಟರು ತಯಾರಿಸುವ ಮನೆ ಅಡುಗೆಯನ್ನು ಮೆಲ್ಲುತ್ತಾ, ಮಕ್ಕಳು ಸಂಸ್ಕೃತ ಪಾಠ ಕೇಳುತ್ತಾರೆ. ಎದುರಿಗಿರುವ ಮೈದಾನದಲ್ಲೇ ಅವರ ಆಟ. ಹತ್ತಿರದಲ್ಲೇ ಇರುವ ‘ಸಂಜೀವಿನಿ’ ಕೇಂದ್ರದ ವೈದ್ಯರು ಅವರ ಬೆಳವಣಿಗೆಯ ಬಗ್ಗೆ ಗಮನವಹಿಸುತ್ತಾರೆ.
ಈಗ 68 ಮಕ್ಕಳು ಇಲ್ಲಿದ್ದಾರೆ. 38 ಹೆಣ್ಣುಮಕ್ಕಳು, 30 ಗಂಡು ಮಕ್ಕಳು ಇದ್ದಾರೆ. ಮಾವಳ್ಳಿಯಲ್ಲಿರುವ ಆಶ್ರಮದಲ್ಲಿ 48 ಮಕ್ಕಳು ಇದ್ದಾರೆ. ಇಲ್ಲಿ ವಿಜಯಪುರ, ರಾಯಚೂರು ಭಾಗದ ಬಡ ಮಕ್ಕಳು ಇದ್ದಾರೆ.
ಮಹಿಳಾ ಮಂಡಲ ಹಾಗೂ ವುಮೆನ್ಸ್ ಲೀಗ್ ಶಾಲೆಗೆ ಮಕ್ಕಳು ಹೋಗುತ್ತಾರೆ. ಎಸ್ಸೆಸ್ಸೆಲ್ಸಿ ನಂತರ ಕೆಲವರು ಕೌಶಲ ಕೋರ್ಸ್‌ಗಳನ್ನು ಮಾಡಿದರೆ, ಹೆಣ್ಣು ಮಕ್ಕಳು ಹಾಸ್ಟೆಲ್‌ಗಳಿಗೆ ಹೋಗಿ ಸ್ವತಂತ್ರವಾಗಿ ಜೀವನ ರೂಪಿಸಿಕೊಳ್ಳುತ್ತಾರೆ. ಹೊಲಿಗೆ ಕೆಲಸದಿಂದ ಹಿಡಿದು ಇಲ್ಲಿ ಎಲ್ಲಾ ರೀತಿಯ ಕೌಶಲಗಳನ್ನು ಕಲಿಯುವ ಅವಕಾಶಗಳೂ ಇವೆ.
ಇಲ್ಲಿಯ ಮಕ್ಕಳು ದೊಡ್ಡವರಾದ ಮೇಲೆ ಸ್ವೀಡನ್, ಕ್ಯಾಲಿಫೋರ್ನಿಯಾದಲ್ಲಿಯೂ ಕೆಲಸ ಮಾಡುವ ಮೂಲಕ ಸ್ವಂತ ಗೂಡು ಕಟ್ಟಿಕೊಂಡಿದ್ದಾರೆ. ಕೆಲಸ ಮಾಡುತ್ತಿರುವವರಲ್ಲಿ ಕೆಲವರು ಅಮೃತಮಹೋತ್ಸವಕ್ಕೆ ಬರುವ ನಿರೀಕ್ಷೆ ಇದೆ.
ಅಮೃತ ಮಹೋತ್ಸವ ನಾಳೆಯಿಂದ
ನವೆಂಬರ್ 24 ಹಾಗೂ 25ರಂದು ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಬಿಎಂಎಸ್ ಸಂಸ್ಥೆಯ ನಿರ್ದೇಶಕ ಪಿ. ದಯಾನಂದ ಪೈ ಅವರು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಶಿಶು ನಿವಾಸದ ಸಿ.ವಿ. ವೆಂಕಟಕೃಷ್ಣ, ಕೆ.ಪಿ.ಗೀತಾ, ಗಣಪತಿ ಹೆಗಡೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು.
ದಾನಿಗಳ ಸಹಕಾರಿಗಳ ಸಮಾವೇಶ, ಸೇವಾಕಿರಣ ಯೋಜನೆ, ಪೋಷಕರ ಸಮಾವೇಶ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.