ಬೆಂಗಳೂರು,ನ.22-ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಗೊಳಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿರುವ ಬೆನ್ನಲ್ಲೆ ಅತ್ತ ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲೇಬೇಕೆಂದು ಮತ್ತೆ ಬೀದಿಗಿಳಿದಿದ್ದಾರೆ.
ಕಬ್ಬು ಬೆಳೆಗಾರರ ಸಮಸ್ಯೆಯನ್ನು ಈಡೇರಿಸುವುದಾಗಿ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಅಭಯ ನೀಡಿದ್ದರು.ಆದರೆ ಕಬ್ಬು ಬೆಳೆಗಾರರು ಮಾತ್ರ ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಇಂದು ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಮತ್ತಿತರ ಕಡೆ ರೈತ ಸಂಘಟನೆಗಳ ಮುಖಂಡರು ಬೀದಿಗಳಿದು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಜಿಲ್ಲಾ ಕಚೇರಿಗೆ ಬೀಗ:
ಬೆಳಗಾವಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ರೈತರು ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಜಡಿದು ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ರೈತ ಸಂಘಟನೆಯ ಮುಖಂಡರು ಜಿಲ್ಲಾ ಕಚೇರಿಯ ಮುಂಭಾಗಕ್ಕೆ ಬೀಗ ಜಡಿದಿದ್ದಲ್ಲದೆ ಹಸಿರುಶಾಲು ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಪರಿಣಾಮ ಬೆಳಗ್ಗೆ ಕಚೇರಿಗೆ ಬರಬೇಕಾಗಿದ್ದ ಸಿಬ್ಬಂದಿ ಹಿಂಬಾಗಿಲ ಗೇಟಿನ ಮೂಲಕ ಒಳಪ್ರವೇಶಿಸಿದರು.ಯಾವುದೇ ಕಾರಣಕ್ಕೂ ಬೀಗ ತೆಗೆಯಬಾರದು, ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಹಿಂಪಡೆದುಕೊಳ್ಳುವುದು ಎಂದು ರೈತರು ಆಕ್ರೋಶಗೊಂಡರು.
ಸರ್ಕಾರ ನಿಮ್ಮ ಬೇಡಿಕೆಗಳನ್ನು ಈಡೇರಿಸಲಿದೆ ಎಂದು ಜಿಲ್ಲಾಧಿಕಾರಿ ಪರಿಪರಿಯಾಗಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಇಂತಹ ಸುಳ್ಳು ಭರವಸೆಗಳನ್ನು ಕೇಳಿ ಕೇಳಿ ಸಾಕಾಗಿದೆ.ತಕ್ಷಣವೇ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಸಕ್ಕರೆ ಕಾರ್ಖಾನೆ ಮಾಲೀಕರು ನೀಡಬೇಕಿರುವ ಬಾಕಿ ಹಣವನ್ನು ಬಿಡುಗಡೆಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಕಳೆದ ಎರಡು ವರ್ಷಗಳಿಂದ ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ವೇತನವನ್ನು ನೀಡುತ್ತಿಲ್ಲ. ಹೊಸದಾಗಿ ಬಂದಿರುವ ಕಬ್ಬು ಅರೆಯಲು ಅವಕಾಶ ನೀಡುತ್ತಿಲ್ಲ. ಪರಿಣಾಮ ರೈತ ವಿಷ ಕುಡಿಯುವ ಸ್ಥಿತಿಗೆ ಬಂದಿದ್ದಾನೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಪ್ರಯತ್ನಿಸಬೇಕೆಂದು ಆಗ್ರಹಿಸಿದರು.
ಇತ್ತ ಚಿಕ್ಕೋಡಿಯಲ್ಲೂ ರೈತರು ಪುನಃ ಇಂದು ಪ್ರತಿಭಟನೆ ನಡೆಸಿದರು.ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಬಳಿ ಬೆಳಗ್ಗೆಯೇ ಜಮಾಯಿಸಿದ್ದ ಭಾರೀ ಸಂಖ್ಯೆಯ ರೈತರು ಕಚೇರಿ ಬಳಿ ಪ್ರತಿಭಟನೆ ನಡೆಸಿ ಸರ್ಕಾರ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು.ಯಾವುದೇ ಕಾರಣಕ್ಕೂ ಮಾಲೀಕರ ಬೆದರಿಕೆಗೆ ಸೊಪ್ಪು ಹಾಕಬಾರದು ಎಂದು ಒತ್ತಾಯಿಸಿದರು.