ವಿಧಾನ ಪರಿಷತ್ ಸದಸ್ಯರ ವಿರುದ್ಧ ಎಫ್ಐಅರ್, ಹೋರಾಟಕ್ಕೆ ಸಂದ ಜಯ ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ

ಬೆಂಗಳೂರು, ನ.21- ಟಿಎ, ಡಿಎ ವಂಚನೆ ಪ್ರಕರಣದಲ್ಲಿ ಏಳು ಮಂದಿ ವಿಧಾನ ಪರಿಷತ್ ಸದಸ್ಯರು ಹಾಗೂ ಒಬ್ಬ ಮಾಜಿ ಸದಸ್ಯರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಲು ನನ್ನ ಹೋರಾಟಕ್ಕೆ ಸಂದ ಜಯ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ವಿಧಾನಪರಿಷತ್ ಸದಸ್ಯರಾದ ಬೋಸರಾಜ್, ಲಕ್ಷ್ಮಿನಾರಾಯಣ್, ಅಲ್ಲಂ ವೀರಭದ್ರಪ್ಪ, ಅಪ್ಪಾಜಿಗೌಡ, ಎಸ್.ರವಿ, ಆರ್.ಬಿ.ತಿಮ್ಮಾಪುರ, ಸಿ.ಆರ್.ಮನೋಹರ್ ಹಾಗೂ ರಘು ಆಚಾರ್ ಅವರುಗಳು ಕಾಂಗ್ರೆಸ್ ಅಭ್ಯರ್ಥಿಯನ್ನು ಮೇಯರ್‍ರನ್ನಾಗಿ ಆಯ್ಕೆ ಮಾಡುವ ಉದ್ದೇಶದಿಂದ ತಮ್ಮ ವಿಳಾಸಗಳನ್ನು ಬೆಂಗಳೂರಿಗೆ ವರ್ಗಾಯಿಸಿಕೊಂಡು ಮತ ಚಲಾಯಿಸಿದ್ದರು.
ಆದರೆ, ಸರ್ಕಾರದಿಂದ ಪಡೆಯುವ ಟಿಎ, ಡಿಎಗೋಸ್ಕರ ವಿಧಾನಸೌಧದಲ್ಲಿ ತಮ್ಮ ಸ್ವಕ್ಷೇತ್ರದಿಂದಲೇ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುವುದಾಗಿ ವಂಚಿಸಿ ಲಕ್ಷಾಂತರ ರೂ.ಗಳನ್ನು ವಂಚಿಸಿದ್ದರು.

ಎಂಟು ಸದಸ್ಯರ ಈ ಅಕ್ರಮವನ್ನು ಪತ್ತೆಹಚ್ಚಿ ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ದೂರು ನೀಡಿದ್ದೆ. ಆದರೆ, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಇದೀಗ ರಾಮಣ್ಣ ಎಂಬ ವ್ಯಕ್ತಿ ಈ ಅಕ್ರಮ ಕುರಿತಂತೆ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿದ್ದ ದೂರನ್ನಾಧರಿಸಿ ಎಂಟು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೆÇಲೀಸರಿಗೆ ನ್ಯಾಯಾಲಯ ಆದೇಶ ನೀಡಿರುವುದು ಸ್ವಾಗತಾರ್ಹ ಎಂದು ಪದ್ಮನಾಭರೆಡ್ಡಿ ತಿಳಿಸಿದ್ದಾರೆ.

ಎಂಟು ಮಂದಿಗೆ ಮತದಾನದ ಹಕ್ಕು ನೀಡಬಾರದು ಎಂಬ ನನ್ನ ಮನವಿಗೆ ಯಾವುದೇ ಮನ್ನಣೆ ನೀಡಿರಲಿಲ್ಲ. ಇದೀಗ ಉಪಮೇಯರ್ ಚುನಾವಣೆಯಲ್ಲಿ ಮತ್ತೆ ತಮಗೆ ಸೋಲುಂಟಾಗಬಹುದು ಎಂಬ ದುರುದ್ದೇಶದಿಂದ ಇನ್ನೂ ಕೆಲವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಈ ಕರ್ಮಕಾಂಡವನ್ನು ಆದಷ್ಟು ಶೀಘ್ರ ಬಯಲಿಗೆಳೆಯುತ್ತೇನೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿ.ಎಸ್.ಉಗ್ರಪ್ಪ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು, ರಮಿಳಾ ಉಮಾಶಂಕರ್ ನಿಧನರಾಗಿರುವುದು ಹಾಗೂ ಪಕ್ಷೇತರ ಸದಸ್ಯ ಎಳುಮಲೈ ಅವರು ಕೋಮಾ ತಲುಪಿರುವುದರಿಂದ ಮತದಾರರ ಸಂಖ್ಯೆ ಕಡಿಮೆಯಾಗಬಹುದು ಎಂಬ ಉದ್ದೇಶದಿಂದ ಇತ್ತೀಚೆಗೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತಿದೆ.

ಕೋಲಾರ ಮೂಲದ ನಜೀರ್ ಅಹಮ್ಮದ್ ಅವರ ನಿವಾಸವನ್ನು ಬೆಂಗಳೂರಿಗೆ ವರ್ಗಾಯಿಸಿ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಆಡಳಿತ ವರ್ಗದ ಈ ಅನ್ಯಾಯಕ್ಕೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ರೆಡ್ಡಿ ದೂರಿದರು.

ಹೊಸದಾಗಿ ಸೇರಿಸಿರುವ ಮತದಾರರನ್ನು ಹಾಗೂ ಎಫ್‍ಐಆರ್ ದಾಖಲಾಗಿರುವ ಏಳು ಮಂದಿ ವಿಧಾನ ಪರಿಷತ್ ಸದಸ್ಯರಿಗೆ ಉಪಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಬಾರದು. ಒಂದು ವೇಳೆ ಪ್ರಾದೇಶಿಕ ಆಯುಕ್ತರು ಕಾಂಗ್ರೆಸ್ ಏಜೆಂಟರಂತೆ ವರ್ತಿಸಿದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದು ಎಂದು ಪದ್ಮನಾಭರೆಡ್ಡಿ ಎಚ್ಚರಿಸಿದರು.

ಸ್ಥಾಯಿ ಸಮಿತಿ ಅವಧಿ ನ.9ಕ್ಕೆ ಪೂರ್ಣಗೊಂಡರೂ ಸರ್ಕಾರದ ಕೈಗೊಂಬೆಯಾಗಿರುವ ಪ್ರಾದೇಶಿಕ ಆಯುಕ್ತರು ನ.10ರೊಳಗೆ ಚುನಾವಣೆ ನಡೆಸದೆ ಕುಂಟುನೆಪ ಹೇಳಿಕೊಂಡು ಚುನಾವಣೆಯನ್ನು ಒಂದು ತಿಂಗಳು ಮುಂದೂಡುವ ಷಡ್ಯಂತ್ರ ಮಾಡಿದ್ದಾರೆ. ಅವರ ಈ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ