ಉಪಮೇಯರ್ ಸ್ಥಾನಕ್ಕೆ ಡಿ. 7ರಂದು ಚುನಾವಣೆ ನಡೆಯುವ ಸಾಧ್ಯತೆ

ಬೆಂಗಳೂರು, ನ.21- ಪಾಲಿಕೆಯ 12 ಸ್ಥಾಯಿ ಸಮಿತಿಗಳ ತಲಾ 11 ಸದಸ್ಯರ ಆಯ್ಕೆಗೆ ಹಾಗೂ ರಮಿಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನಕ್ಕೆ ಡಿಸೆಂಬರ್ 7ರಂದು ಚುನಾವಣೆ ನಡೆಯುವ ಸಾಧ್ಯತೆಗಳಿವೆ.

12 ಸ್ಥಾಯಿ ಸಮಿತಿಗಳ ಅವಧಿ ಕಳೆದ ನ.9ಕ್ಕೆ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಕೂಡಲೇ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಬೇಕಿತ್ತು.

ಆದರೆ, ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ನಿಧನ ಮತ್ತು ಉಗ್ರಪ್ಪ ಅವರು ಸಂಸತ್ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಕೊಡುವಂತೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ನವೆಂಬರ್‍ನಲ್ಲೇ ನಡೆಯಬೇಕಿದ್ದ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ಡಿಸೆಂಬರ್‍ಗೆ ಮುಂದೂಡಲ್ಪಟ್ಟಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಅಂತಿಮ ಪಟ್ಟಿಯನ್ನು ಬಿಬಿಎಂಪಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ರವಾನಿಸಿದೆ. ಹೀಗಾಗಿ ನಾಳೆ ಅಥವಾ ನಾಡಿದ್ದು ಪ್ರಾದೇಶಿಕ ಆಯುಕ್ತರು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಮತ್ತು ಉಪಮೇಯರ್ ಚುನಾವಣೆಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
ಡೆಪ್ಯೂಟಿ ಮೇಯರ್ ಹುದ್ದೆಗೆ ಫೈಟ್: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದಲ್ಲಿ ಜೆಡಿಎಸ್‍ನ ರಮಿಳಾ ಉಮಾಶಂಕರ್ ಅವರಿಗೆ ಉಪಮೇಯರ್ ಹುದ್ದೆ ಒಲಿದುಬಂದಿತ್ತು.

ಆದರೆ, ಕೌನ್ಸಿಲ್ ಸಭೆಯ ಉಪಮೇಯರ್ ಸ್ಥಾನದಲ್ಲಿ ಕೂರುವ ಮೊದಲೇ ರಮಿಳಾ ಉಮಾಶಂಕರ್ ಅವರು ಅಕಾಲಿಕ ಸಾವಿಗೆ ತುತ್ತಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮರು ಚುನಾವಣೆ ನಡೆಸಲಾಗುತ್ತಿದೆ.

ರಮಿಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನದ ಮೇಲೆ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಕಣ್ಣಿಟ್ಟಿದ್ದಾರೆ.
ನಮ್ಮ ಬೆಂಬಲದಿಂದಲೇ ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಆಡಳಿತ ಅಧಿಕಾರಕ್ಕೆ ಬಂದಿದ್ದು. ಹೀಗಾಗಿ ಏಳು ಮಂದಿ ಪಕ್ಷೇತರರಲ್ಲಿ ಒಬ್ಬರಿಗೆ ಉಪಮೇಯರ್ ಸ್ಥಾನ ನೀಡುವಂತೆ ಪಕ್ಷೇತರರು ಪಟ್ಟು ಹಿಡಿದಿದ್ದಾರೆ.

ಪಕ್ಷೇತರರ ಈ ಬಿಗಿಪಟ್ಟಿನ ನಡುವೆಯೂ ಉಪಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ಸದಸ್ಯರಾದ ನಾಗಪುರ ವಾರ್ಡ್‍ನ ಭದ್ರೇಗೌಡ, ವಿಶ್ವನಾಥ್ ನಾಗೇನಹಳ್ಳಿ ವಾರ್ಡ್‍ನ ರಾಜಶೇಖರ್ ಹಾಗೂ ಪಾಲಿಕೆಯಲ್ಲಿ ಜೆಡಿಎಸ್ ಗುಂಪಿನ ನಾಯಕಿಯಾಗಿರುವ ನೇತ್ರಾ ನಾರಾಯಣ್ ನಡುವೆ ತೀವ್ರ ಪೈಪೆÇೀಟಿ ಏರ್ಪಟ್ಟಿದೆ.

ರಮಿಳಾ ಉಮಾಶಂಕರ್ ಅವರನ್ನು ಉಪಮೇಯರ್‍ರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಾಗೂ ಸಚಿವ ಬಂಡೆಪ್ಪ ಕಾಶಂಪೂರ್ ಅವರು ರಮಿಳಾ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನವನ್ನು ಅದೇ ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಗೆ ಮೀಸಲಿಡಬೇಕು ಎಂದು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ವಿಶ್ವನಾಥ್ ನಾಗೇನಹಳ್ಳಿ ವಾರ್ಡ್‍ನ ರಾಜಶೇಖರ್ ಅವರ ಹೆಸರು ಮುಂಚೂಣಿಗೆ ಬಂದಿದೆ.

ಇದರ ಜತೆಗೆ ಭದ್ರೇಗೌಡ ಮತ್ತು ನೇತ್ರಾ ನಾರಾಯಣ್ ಅವರು ತಮ್ಮ ಗಾಡ್‍ಫಾದರ್‍ಗಳ ಮೂಲಕ ಉಪಮೇಯರ್ ಸ್ಥಾನ ಅಲಂಕರಿಸಲು ಕಸರತ್ತು ನಡೆಸುತ್ತಿದ್ದಾರೆ.
ಒಟ್ಟಾರೆ ಮೂವರಲ್ಲಿ ಒಬ್ಬರು ರಮಿಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ