ಬೆಂಗಳೂರು,ನ.21- ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವತಿಯಿಂದ ನಾಳೆ ಗಾಂಧಿನಗರದಲ್ಲಿರುವ ರಾಜ್ಯಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತು ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಸ್.ಜಯಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮಾನ ಗುಣಮಟ್ಟದ ಶಿಕ್ಷಣ, ಸಾರ್ವತ್ರೀಕರಣ ಕಾರ್ಯಕ್ರಮ ಮಗು ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ಮುಖ್ಯಸ್ಥರಾದ ವಿ.ಪಿ.ನಿರಂಜನಾರಾಧ್ಯ ಹಾಗೂ ಸಮಸಮಾಜ ಗೆಳೆಯರ ಬಳಗದ ಅಧ್ಯಕ್ಷ ಗಂಗಾಧರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಎಸ್ಡಿಎಂಸಿಗಳು ತಮ್ಮ ಕೆಲಸಗಳನ್ನು ಮತ್ತಷ್ಟು ಉತ್ತಮ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಶಿಕ್ಷಣ ಇಲಾಖೆಯ ಬೆಂಬಲ ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಣದ ಕುರಿತು ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಪೂರಕವಾದ ಅಂಶಗಳನ್ನು ಚರ್ಚಿಸಲು ಈ ಒಂದು ದಿನದ ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.